1 ರೂ.ಗೆ ಕೇವಲ 13 ಪೈಸೆ ವಾಪಸ್: ಕೇಂದ್ರದ ವಿರುದ್ಧ ಸಂಕ್ರಮಣದಂದು ಸಂಕಲ್ಪ ಮಾಡಲು ಸಿಎಂ ಕರೆ
ಕೇಂದ್ರ ಸರ್ಕಾರವು ಕರ್ನಾಟಕಕ್ಕೆ ತೆರಿಗೆ ಹಂಚಿಕೆಯಲ್ಲಿ ಅನ್ಯಾಯ ಮಾಡುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದಾರೆ. ರಾಜ್ಯವು ದೇಶಕ್ಕೆ ಅಪಾರವಾಗಿ ತೆರಿಗೆ ನೀಡುತ್ತಿದ್ದರೂ, ಅದಕ್ಕೆ ತಕ್ಕ ಪ್ರಮಾಣದಲ್ಲಿ ಹಿಂತಿರುಗಿಸುತ್ತಿಲ್ಲ ಎಂದಿದ್ದಾರೆ. ಬಿಜೆಪಿ ಸರ್ಕಾರ ಕೇವಲ ದೆಹಲಿ ಗುಲಾಮರಾಗಿದ್ದು, ರಾಜ್ಯದ ಹಿತಾಸಕ್ತಿ ಕಡೆಗಣಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಬೆಂಗಳೂರು, ಜನವರಿ 13: ತೆರಿಗೆ ಹಂಚಿಕೆಯಲ್ಲಿ ಕರ್ನಾಟಕಕ್ಕೆ ಮತ್ತೆ ಮತ್ತೆ ಆಗುತ್ತಿರುವ ಅನ್ಯಾಯದ ವಿರುದ್ಧ ದನಿ ಎತ್ತಬೇಕಾದ ಬಿಜೆಪಿ ನಾಯಕರು ದೆಹಲಿ ಗುಲಾಮರಾಗಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಕೇಂದ್ರ ಸರ್ಕಾರ ಮತ್ತು ರಾಜ್ಯ ಬಿಜೆಪಿ ವಿರುದ್ಧ ವಾಗ್ದಾಳಿ ಮಾಡಿದ್ದಾರೆ. ಜನಪ್ರತಿನಿಧಿಗಳು ದಾರಿ ತಪ್ಪಿದಾಗ ಸರಿದಾರಿಗೆ ತರುವ ಹೊಣೆ ಜನರದ್ದಾಗಿದೆ ಎಂದು ಕಿಡಿಕಾರಿದ್ದಾರೆ.
ಕನ್ನಡಿಗರಿಗೆ ಅನ್ಯಾಯ ಮತ್ತು ಅವಮಾನವಾಗಿದೆ
ಈ ಕುರಿತಾಗಿ ಟ್ವೀಟ್ ಮಾಡಿರುವ ಸಿಎಂ ಸಿದ್ದರಾಮಯ್ಯ, ಭಾರತೀಯ ಜನತಾ ಪಕ್ಷದ ನಾಯಕರು ಬಾಯಿ ಬಿಟ್ಟರೆ ದೇಶಪ್ರೇಮದ ಬಗ್ಗೆ ಮಾತನಾಡುತ್ತಾರೆ. ರಾಜ್ಯವನ್ನೇ ಪ್ರೀತಿಸದವರು ದೇಶವನ್ನು ಹೇಗೆ ಪ್ರೀತಿಸಲು ಸಾಧ‍್ಯ ಎನ್ನುವುದನ್ನು ಇವರೇ ಹೇಳಬೇಕು. ಕೇಂದ್ರ ಸರ್ಕಾರ ಸೇಡು ತೀರಿಸಿಕೊಳ್ಳುವವರಂತೆ ಕರ್ನಾಟಕಕ್ಕೆ ನಿರಂತರವಾಗಿ ಮಾಡುತ್ತಿರುವ ಅನ್ಯಾಯದ ವಿರುದ್ಧ ದನಿ ಎತ್ತಬೇಕಿದ್ದ ರಾಜ್ಯದ ಬಿಜೆಪಿ ನಾಯಕರು ಮತ್ತು ಸಂಸದರು ಅನ್ಯಾಯಕೋರ ಕೇಂದ್ರ ಸರ್ಕಾರವನ್ನು ಸಮರ್ಥಿಸುತ್ತಿರುವುದು ರಾಜ್ಯದ ಏಳು ಕೋಟಿ ಕನ್ನಡಿಗರಿಗೆ ಮಾಡುತ್ತಿರುವ ಅನ್ಯಾಯ ಮತ್ತು ಅವಮಾನವಾಗಿದೆ ಎಂದಿದ್ದಾರೆ.