ಸುಲಭವಾಗಿ ಮನೆಯಲ್ಲಿ ಕ್ರಿಸ್ಮಸ್ ಚಾಕೊಲೇಟ್ ಕೇಕ್ ತಯಾರಿಸುವ ವಿಧಾನ
ಕ್ರಿಸ್ಮಸ್ ಹಬ್ಬವನ್ನು ಪ್ರಪಂಚದಾದ್ಯಂತ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಪ್ರಸ್ತುತ ಕ್ರೈಸ್ತ ಸಮುದಾಯದ ಜತೆಗೆ ಇತರೆ ಸಮುದಾಯದವರೂ ಕ್ರಿಸ್ಮಸ್ ಆಚರಣೆಯಲ್ಲಿ ಪಾಲ್ಗೊಳ್ಳಲು ಆರಂಭಿಸಿದ್ದಾರೆ. ಸಾಮಾನ್ಯವಾಗಿ ಕ್ರೈಸ್ತರ ಮನೆಗಳಲ್ಲಿ ಕ್ರಿಸ್ಮಸ್ ಹಬ್ಬದ ಖುಷಿಯನ್ನು ಪರಸ್ಪರ ಹಂಚಿಕೊಳ್ಳಲು ಕೇಕ್ ತಯಾರಿಸುವ ವಿಶೇಷ ಸಂಪ್ರದಾಯವಿದೆ. ಈ ಕ್ರಿಸ್ಮಸ್‌ನಲ್ಲಿ ನೀವು ಸಹ ಮನೆಯಲ್ಲಿ ಕೇಕ್ ಮಾಡಲು ಬಯಸಿದರೆ ಚಾಕೊಲೇಟ್ ಕೇಕ್ ತಯಾರಿಸಬಹುದು.
ಕೇಕ್ ಇಲ್ಲದೆ ಕ್ರಿಸ್ಮಸ್ ಆಚರಣೆ ಪೂರ್ಣಗೊಳ್ಳುವುದಿಲ್ಲ. ಕ್ರಿಸ್ಮಸ್ ಆಚರಿಸುವ ಚರ್ಚ್, ಅಂಗಡಿಗಳಲ್ಲಿ, ಮನೆಗಳಲ್ಲಿ ಕೇಕ್ ಅನ್ನು ನೀಡಲಾಗುತ್ತದೆ. ನೀವು ಈ ಕ್ರಿಸ್ಮಸ್ ಆಚರಣೆ ಸಮಯದಲ್ಲಿ ಸಿಹಿಯನ್ನು ನೀಡಲು ಬಯಸಿದರೆ ಚಾಕೊಲೇಟ್ ಕೇಕ್ ಉತ್ತಮ ಆಯ್ಕೆಯಾಗಿದೆ. ಹಾಗಾದರೀಗ ಚಾಕೊಲೇಟ್ ಕೇಕ್ ತಯಾರಿಸುವ ವಿಧಾನವನ್ನು ತಿಳಿಯೋಣ. ಅದಕ್ಕೂ ಮೊದಲು ಇದಕ್ಕೆ ಅಗತ್ಯವಾದ ಪದಾರ್ಥಗಳ ಬಗ್ಗೆ ತಿಳಿಯೋಣ.
ಚಾಕೊಲೇಟ್ ಕೇಕ್ ತಯಾರಿಸಲು ಬೇಕಾಗುವ ಸಾಮಾಗ್ರಿಗಳು:–
*ಮೈದಾ ಹಿಟ್ಟು – 1 ಕಪ್
*ಚಾಕೊಲೇಟ್ ಪೌಡರ್-2 ಟೀಸ್ಪೂನ್
*ಮೊಸರು – 1/2 ಕಪ್
*ಹಾಲು – 1/4 ಕಪ್
*ಬೇಕಿಂಗ್ ಪೌಡರ್ – 1 ಟೀಸ್ಪೂನ್
*ಹಾಲಿನ ಪುಡಿ – 2 ಟೀಸ್ಪೂನ್
*ಡ್ರೈ ಫ್ರೂಟ್ಸ್ (ಮಿಶ್ರಣ) – 4-5 ಟೀಸ್ಪೂನ್
*ವೆನಿಲ್ಲಾ ಎಸೆನ್ಸ್ – 1 ಟೀಸ್ಪೂನ್
*ಬಾದಾಮಿ ಚೂರುಗಳು – 2 ಟೀಸ್ಪೂನ್
*ತುಪ್ಪ – 1/2 ಕಪ್
*ಸಕ್ಕರೆ ಪುಡಿ – 1/2 ಕಪ್
*ಉಪ್ಪು – 1 ಚಿಟಿಕೆ
ಚಾಕೊಲೇಟ್ ಕೇಕ್ ರೆಸಿಪಿ:-
*ಚಾಕೊಲೇಟ್ ಕೇಕ್ ಮಾಡಲು ಮೊದಲು ಒಂದು ಬಟ್ಟಲಿನಲ್ಲಿ ಮೈದಾ ಹಿಟ್ಟನ್ನು ಶೋಧಿಸಿ. ಇದಕ್ಕೆ ಬೇಕಿಂಗ್ ಪೌಡರ್, ಹಾಲಿನ ಪುಡಿ, ಚಾಕೊಲೇಟ್ ಪೌಡರ್, ಅಡಿಗೆ ಸೋಡಾವನ್ನು ಶೋಧಿಸಿ ಹಾಕಿ ಎಲ್ಲಾ ಪದಾರ್ಥಗಳನ್ನು ಚೆನ್ನಾಗಿ ಮಿಶ್ರಣ ಮಾಡಿ. ಇದರ ನಂತರ ಒಂದು ಚಿಟಿಕೆ ಉಪ್ಪು ಸೇರಿಸಿ ಮಿಶ್ರಣ ಮಾಡಿ. ಇದರ ನಂತರ ಮತ್ತೊಂದು ಬೌಲ್ ತೆಗೆದುಕೊಂಡು ಮೊಸರು, ಸಕ್ಕರೆ ಪುಡಿ ಮತ್ತು ತುಪ್ಪ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.
*ಬಳಿಕ ಎರಡನ್ನೂ ಸೇರಿಸಿ ಮಿಶ್ರಣ ಮಾಡಿ. ಇದಾದ ನಂತರ ಇದಕ್ಕೆ ಹಾಲು ಸೇರಿಸಿ ದಪ್ಪ ಪೇಸ್ಟ್ ತಯಾರಿಸಿ. ಈ ಮಿಶ್ರಣಕ್ಕೆ ವೆನಿಲ್ಲಾ ಎಸೆನ್ಸ್ ಸೇರಿಸಿ ಮತ್ತು ಅದರಲ್ಲಿ ಯಾವುದೇ ಉಂಡೆಗಳು ಉಳಿಯದಂತೆ ಚೆನ್ನಾಗಿ ಮಿಶ್ರಣ ಮಾಡಿ. ಪೇಸ್ಟ್ ಚೆನ್ನಾಗಿ ಸಿದ್ಧವಾದಾಗ ಅದಕ್ಕೆ ಸಣ್ಣಗೆ ಕತ್ತರಿಸಿದ ಡ್ರೈ ಫ್ರೂಟ್ಸ್ ಸೇರಿಸಿ ಮಿಕ್ಸ್ ಮಾಡಿ.
*ಬಳಿಕ ಬೇಕಿಂಗ್ ಟಿನ್ ತೆಗೆದುಕೊಂಡು ಅದಕ್ಕೆ ತುಪ್ಪವನ್ನು ಸವರಿ ಚೆನ್ನಾಗಿ ಗ್ರೀಸ್ ಮಾಡಿ. ನಂತರ ಸಿದ್ಧಪಡಿಸಿದ ಹಿಟ್ಟನ್ನು ಅದರೊಳಗೆ ಹಾಕಿರಿ ಮತ್ತು ಅದನ್ನು ಎರಡು-ಮೂರು ಬಾರಿ ನೆಲದ ಮೇಲೆ ಟ್ಯಾಪ್ ಮಾಡಿ. ಇದರಿಂದ ಬ್ಯಾಟರ್ ಸರಿಯಾಗಿ ಹೊಂದಿಕೊಳ್ಳುತ್ತದೆ. ಕೇಕ್ನಲ್ಲಿ ಯಾವುದೇ ಗುಳ್ಳೆಗಳು ಅಥವಾ ಗಾಳಿ ಇರುವುದಿಲ್ಲ.
ನಂತರ ಬಾದಾಮಿ ಚೂರುಗಳನ್ನು ಹಿಟ್ಟಿನ ಮೇಲೆ ಹಾಕಿ ಚೆನ್ನಾಗಿ ಹರಡಿ. ಇದನ್ನು 180 ಡಿಗ್ರಿ ಸೆಲ್ಸಿಯಸ್‌ನಲ್ಲಿ ಇಟ್ಟ ಓವನ್‌ನಲ್ಲಿ ಬೇಯಿಸಲು ಇಡಿ. ನಿಗದಿತ ಸಮಯದ ನಂತರ ಕೇಕ್ ಅನ್ನು ಹೊರತೆಗೆಯಿರಿ. ಬೇಕಿಂಗ್ ಟಿನ್ ತಟ್ಟೆಯ ಮೇಲೆ ಉಲ್ಟಾ ಹಾಕಿ ಅಲಂಕರಿಸಿದರೆ ಚಾಕೊಲೇಟ್ ಕೇಕ್ ಸವಿಯಲು ಸಿದ್ಧ.
* ಒಂದು ವೇಳೆ ನಿಮ್ಮ ಬಳಿ ಓವನ್ ಇಲ್ಲಾ ಅಂತಾದರೆ- ಒಂದು ಕುಕ್ಕರ್ ತೆಗೆದುಕೊಂಡು ಬೇಕಿಂಗ್ ಟಿನ್ ಅರ್ಧಕ್ಕೆ ಬರುವಷ್ಟು ನೀರು ಹಾಕಿ. ನೀರನಲ್ಲಿ ಒಂದು ಸ್ಟ್ಯಾಂಡ್ ಇಟ್ಟು ಅದರ ಮೇಲೆ ಬೇಕಿಂಗ್ ಟಿನ್ ಅನ್ನು ಇರಿಸಿ ಕುಕ್ಕರ್ ಮುಚ್ಚಳ ಮುಚ್ಚಿ ವಿಸಿಲ್ ಹಾಕದೇ ಉರಿ ಸಣ್ಣ ಮಾಡಿ ಬಿಟ್ಟುಬಿಡಿ. 1 ಗಂಟೆ ಒಳಗೆ ಈ ಕೇಕ್ ರೆಡಿಯಾಗಿರುತ್ತದೆ. ಕುಕ್ಕರ ಮುಚ್ಚಳ ತೆಗೆದು ಅದನ್ನು ಒಮ್ಮೆ ಚೆಕ್ ಮಾಡಿ. ಬಳಿಕ ಒಂದು ಪಾತ್ರೆಗೆ ತೆಗೆದುಕೊಂಡು ಅಲಂಕರಿಸಿದರೆ ಕ್ರಿಸ್ಮಸ್ ಚಾಕೊಲೇಟ್ ಕೇಕ್ ಸವಿಯಲು ಸಿದ್ಧ.