ಮಹಿಳೆಯರನ್ನು ತಮ್ಮ ಕುಟುಂಬದ ಕ್ರೌರ್ಯದಿಂದ ರಕ್ಷಿಸುವ ಕಾನೂನುಗಳನ್ನು ದುರುಪಯೋಗಪಡಿಸಿಕೊಳ್ಳುವ ಪ್ರವೃತ್ತಿ ಹೆಚ್ಚುತ್ತಿದೆ ವರದಕ್ಷಿಣೆ ಕಿರುಕುಳ ಪ್ರಕರಣಗಳನ್ನು ನಿರ್ಧರಿಸುವಾಗ ನ್ಯಾಯಾಲಯಗಳು ಎಚ್ಚರಿಕೆ ವಹಿಸಬೇಕು: ಸುಪ್ರೀಂ ಕೋರ್ಟ್
ಬೆಂಗಳೂರು ಇಂಜಿನಿಯರ್ ಅತುಲ್ ಸುಭಾಷ್ ಆತ್ಮಹತ್ಯೆ ಇದೀಗ ಎಲ್ಲೆಡೆ ಸುದ್ದಿಯಾಗಿದೆ. ಬೆಂಗಳೂರು ಟೆಕ್ಕಿ ಆತ್ಮಹತ್ಯೆಗೆ ಶರಣಾದ ನಂತರ ಸುಪ್ರೀಂ ಕೋರ್ಟ್ ಮಹತ್ವದ ಹೇಳಿಕೆ ನೀಡಿದ್ದು, ವಿವಾಹಿತ ಮಹಿಳೆಯರು ಕಾನೂನನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಮಹಿಳೆಯರನ್ನು ತಮ್ಮ ಕುಟುಂಬದ ಕ್ರೌರ್ಯದಿಂದ ರಕ್ಷಿಸುವ ಕಾನೂನುಗಳನ್ನು ದುರುಪಯೋಗಪಡಿಸಿಕೊಳ್ಳುವ ಪ್ರವೃತ್ತಿ ಹೆಚ್ಚುತ್ತಿದೆ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟಿದ್ದಾರೆ.
ನವದೆಹಲಿ: ವಿವಾಹಿತ ಮಹಿಳೆಯರು ಸ್ವಾರ್ಥಕ್ಕಾಗಿ ತಮ್ಮ ಪತಿ ಮತ್ತು ಅತ್ತೆ-ಮಾವಂದಿರಿಗೆ ಕಿರುಕುಳ ನೀಡಲು ಕಾನೂನನ್ನು ವ್ಯಾಪಕವಾಗಿ ಬಳಸುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಕಳವಳ ವ್ಯಕ್ತಪಡಿಸಿದೆ. 34 ವರ್ಷದ ಬೆಂಗಳೂರಿನ ಟೆಕ್ಕಿ ಅತುಲ್ ಸುಭಾಷ್‌ಗೆ ನ್ಯಾಯಕ್ಕಾಗಿ ಹೆಚ್ಚುತ್ತಿರುವ ಬೇಡಿಕೆಗಳ ಮಧ್ಯೆ ಸುಪ್ರೀಂ ಕೋರ್ಟ್ ಕಳವಳ ವ್ಯಕ್ತಪಡಿಸಿದೆ. ಹಣ ವಸೂಲಿ ಮಾಡಲು ತನ್ನ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸಿದ್ದಾರೆ ಎಂದು ಆರೋಪಿಸಿದ್ದ ಅತುಲ್ ಸುಭಾಷ್ ಪತ್ನಿ ಮತ್ತು ಆಕೆಯ ಕುಟುಂಬದ ಕಿರುಕುಳವನ್ನು ಸೂಸೈಡ್ ನೋಟ್ನಲ್ಲಿ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು.
ಮಹಿಳೆಯರನ್ನು ತಮ್ಮ ಕುಟುಂಬದ ಕ್ರೌರ್ಯದಿಂದ ರಕ್ಷಿಸುವ ಕಾನೂನುಗಳನ್ನು ದುರುಪಯೋಗಪಡಿಸಿಕೊಳ್ಳುವ ಪ್ರವೃತ್ತಿ ಹೆಚ್ಚುತ್ತಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಅಮಾಯಕರ ಮೇಲೆ ಅನಗತ್ಯ ಕಿರುಕುಳವನ್ನು ತಡೆಯಲು ವರದಕ್ಷಿಣೆ ಕಿರುಕುಳ ಪ್ರಕರಣಗಳನ್ನು ನಿರ್ಧರಿಸುವಾಗ ನ್ಯಾಯಾಲಯಗಳು ಎಚ್ಚರಿಕೆ ವಹಿಸಬೇಕು ಎಂದು ಹೇಳಿದೆ.
ಆತ್ಮಹತ್ಯೆಗೆ ಮುನ್ನ, ಅತುಲ್ ಸುಭಾಷ್ ಅವರು 80 ನಿಮಿಷಗಳ ವೀಡಿಯೊವನ್ನು ರೆಕಾರ್ಡ್ ಮಾಡಿದ್ದರು. ಅದರಲ್ಲಿ ಅವರು ತಮ್ಮ ವಿಚ್ಛೇದಿತ ಪತ್ನಿ ನಿಕಿತಾ ಸಿಂಘಾನಿಯಾ ಮತ್ತು ಅವರ ಕುಟುಂಬ ಹಣವನ್ನು ಸುಲಿಗೆ ಮಾಡಲು ತನ್ನ ಮತ್ತು ತನ್ನ ಕುಟುಂಬದ ಮೇಲೆ ಅನೇಕ ಪ್ರಕರಣಗಳನ್ನು ಹಾಕಿದ್ದಾರೆ ಎಂದು ಆರೋಪಿಸಿದ್ದರು. ಇದಲ್ಲದೆ ಅತುಲ್ ತಮ್ಮ 24 ಪುಟಗಳ ಆತ್ಮಹತ್ಯೆ ಪತ್ರದಲ್ಲಿ ನ್ಯಾಯ ವ್ಯವಸ್ಥೆಯನ್ನು ಟೀಕಿಸಿದ್ದರು.
ಇದಕ್ಕೂ ಮುನ್ನ ದೆಹಲಿ ಮೂಲದ ಹಿರಿಯ ವಕೀಲ ವಿಕಾಸ್ ಪಹ್ವಾ ಅವರು ಬೆಂಗಳೂರು ಟೆಕ್ಕಿ ಆತ್ಮಹತ್ಯೆ ಪ್ರಕರಣದ ಕುರಿತು ಮಾತನಾಡಿ, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 498 ಎ ಅನ್ನು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆಯನ್ನು ಉಲ್ಲೇಖಿಸಿ, ನಮ್ಮ ಸಾಮಾಜಿಕ ರಚನೆಯ ಮೇಲೆ ಪರಿಣಾಮ ಬೀರುವ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಹೇಳಿದ್ದರು.
ಸೆಕ್ಷನ್ 498 ಎ ದುರುಪಯೋಗವಾಗುತ್ತಿದೆ ಮತ್ತು ಹಣ ಸುಲಿಗೆ ಮಾಡುವ ಸಾಧನವಾಗಿ ಮಾರ್ಪಟ್ಟಿದೆ ಎಂದು ಹಿರಿಯ ವಕೀಲರು ಆರೋಪಿಸಿದ್ದರು.