ಎಸ್ಎಂ ಕೃಷ್ಣ ಚಿತೆಗೆ ಮೊಮ್ಮಗ ಅಗ್ನಿಸ್ಪರ್ಶ: ರಾಜಕೀಯ ಮುತ್ಸದಿ ಪಂಚಭೂತಗಳಲ್ಲಿ ಲೀನ
SM Krshna Cremation: ಕರ್ನಾಟಕ ಮಾಜಿ ಮುಖ್ಯಮಂತ್ರಿ, ಮಾಜಿ ರಾಜ್ಯಪಾಲ, ಮಾಜಿ ವಿದೇಶಾಂಗ ಸಚಿವ, ರಾಜಕೀಯ ಮುತ್ಸದಿ ಎಸ್ಎಂ ಕೃಷ್ಣ ಅವರ ಅಂತ್ಯಕ್ರಿಯೆ ಸೋಮನಹಳ್ಳಿಯಲ್ಲಿ ನಡೆಯಿತು. ವೈದಿಕ ಪಂಡಿತರಾದ ಭಾನುಪ್ರಕಾಶ್ ಶರ್ಮಾ ನೇತೃತ್ವದಲ್ಲಿ ಅಂತಿಮ ವಿಧಿವಿಧಾನದ ಬಳಿಕ ಮೊಮ್ಮಗ ಅಮರ್ತ್ಯ ಹೆಗ್ಡೆ ಅವರು ತಮ್ಮ ಅಜ್ಜನ(ಎಸ್ಎಂ ಕೃಷ್ಣ) ಚಿತೆಗೆ ಅಗ್ನಿಸ್ಪರ್ಶ ಮಾಡಿದರು. ಈ ಮೂಲಕ ಎಸ್ಎಂ ಕೃಷ್ಣ ಇನ್ನು ನೆನಪು ಮಾತ್ರ.
ಮಂಡ್ಯ, (ಡಿಸೆಂಬರ್ 11): ರಾಜಕೀಯ ಮುತ್ಸದಿ ಎಸ್ಎಂ ಕೃಷ್ಣ ಅವರ ಅಂತ್ಯಕ್ರಿಯೆ ಸರ್ಕಾರಿ ಗೌರವಗಳೊಂದಿಗೆ ಹುಟ್ಟುರಾದ ಸೋಮನಹಳ್ಳಿಯಲ್ಲಿಂದು ನಡೆಯಿತು. ವೈದಿಕ ಪಂಡಿತರಾದ ಭಾನುಪ್ರಕಾಶ್ ಶರ್ಮಾ ನೇತೃತ್ವದಲ್ಲಿ ಒಕ್ಕಲಿಗ ಸಂಪ್ರದಾಯದಂತೆ ನಡೆದ ಅಂತಿಮ ವಿಧಿವಿಧಾನಗಳ ಬಳಿಕ ಮೊಮ್ಮಗ ಅಮರ್ತ್ಯ ಹೆಗ್ಡೆ, ತಮ್ಮ ಅಜ್ಜ ಎಸ್.ಎಂ.ಕೃಷ್ಣ ಅವರ ಚಿತೆಗೆ ಅಗ್ನಿ ಸ್ಪರ್ಶ ಮಾಡಿದರು. ಈ ಮೂಲಕ ರಾಜಕೀಯ ಮುತ್ಸದಿ ಎಸ್ಎಂಕೆ ಪಂಚಭೂತಗಳಲ್ಲಿ ಲೀನರಾದರು.
ಅಗ್ನಿ ಸ್ಪರ್ಶಕ್ಕೂ ಮುನ್ನ ಎಸ್ಎಂ ಕೃಷ್ಣ ಅವರ ಚಿತೆಗೆ ಪತ್ನಿ ಪ್ರೇಮಾ, ಪುತ್ರಿಯರು, ಸಂಬಂಧಿಕರು ಗಂಧದ ಕಟ್ಟಿಗೆ ಇಟ್ಟು ವಿದಾಯ ಹೇಳಿದರು. ಬಳಿಕ ಮಂಡ್ಯ ಜಿಲ್ಲಾ ಪೊಲೀಸ್ ಇಲಾಖೆಯಿಂದ ಮೃತರ ಗೌರವಾರ್ಥವಾಗಿ ಮೂರು ಸುತ್ತು ಕುಶಾಲತೋಪು ಸಿಡಿಸಿ ಗೌರವ ಸಲ್ಲಿಸಲಾಯಿತು. ಪಾರ್ಥಿವ ಶರೀರದ ಮೇಲೆ ಹೊದಿಸಲಾಗಿದ್ದ ತ್ರಿವರ್ಣ ಧ್ವಜವನ್ನು ಗೌರವ ಪೂರ್ವಕವಾಗಿ ಎಸ್.ಎಂ.ಕೃಷ್ಣ ಅವರ ಪತ್ನಿ ಪ್ರೇಮಾ ಅವರಿಗೆ ಹಸ್ತಾಂತರಿಸಲಾಯ್ತು. ನಂತರ ಅಂತಿಮವಾಗಿ ಮೊಮ್ಮಗ ಅಮರ್ತ್ಯ ಹೆಗ್ಡೆ ಎಸ್.ಎಂ.ಕೃಷ್ಣ ಚಿತೆಗೆ ಅಗ್ನಿಸ್ಪರ್ಶ ಮಾಡಿದರು.