ಬಾಣಂತಿಯರ ಸಾವು ಪ್ರಕರಣ: ಐವಿ ಫ್ಲೂಯಿಡ್ ಕಂಪನಿ ವಿರುದ್ಧ 4 ಕ್ರಿಮಿನಲ್ ಕೇಸ್ ದಾಖಲಿಸಲು ಶಿಫಾರಸು
ಕರ್ನಾಟಕದಲ್ಲಿ ಬಾಣಂತಿಯರ ಸರಣಿ ಸಾವು ಸಂಭವಿಸಿದ ಬೆನ್ನಲ್ಲೇ ಬೆಂಗಳೂರಿನಲ್ಲಿರುವ ಔಷಧ ನಿಯಂತ್ರಣ ಮಂಡಳಿ ಎಚ್ಚೆತ್ತುಕೊಂಡಿದೆ. ಸಿಎಂ ಸಿದ್ದರಾಯ್ಯ ಸೂಚನೆಯ ಬಳಿಕ ಬಾಣಂತಿಯರ ಸಾವಿಗೆ ಅಧಿಕಾರಿಗಳಿಂದ ಕಾರಣ ತಿಳಿದುಕೊಂಡು ವರದಿ ಸಿದ್ಧಪಡಿಸಿದ್ದು, ಬಾಣಂತಿಯರ ಸಾವಿಗೆ ಕಾರಣವಾಗಿರುವ ಔಷಧ ಸರಬಾರಜು ಮಾಡಿರುವ ಕಂಪನಿಗಳ ವಿರುದ್ಧ ಕೇಸ್ ದಾಖಲಿಸಲು ಮುಂದಾಗಿದೆ.
ಬೆಂಗಳೂರು, ಡಿಸೆಂಬರ್ 11: ಬಾಣಂತಿಯರ ಸಾವಿನ ಪ್ರಕರಣ ಕುರಿತು ಬೆಂಗಳೂರಿನ ಔಷದ ನಿಯಂತ್ರಣ ಇಲಾಖೆ ಅಧಿಕಾರಿಗಳ ತಂಡ ಕರಡು ವರದಿ ಸಿದ್ಧಪಡಿಸಿದೆ. ಕಳೆದ ವಾರ ಪಶ್ಚಿಮ ಬಂಗಾಳಕ್ಕೆ ಹೋಗಿ ಐವಿ ಫ್ಲೂಯಿಡ್ ತಯಾರಿಕಾ ಘಟಕಕ್ಕೆ ಭೇಟಿ ನೀಡಿ ಬಂದಿರುವ 7 ಮಂದಿ ಅಧಿಕಾರಿಗಳ ತಂಡ ಸರ್ಕಾರಕ್ಕೆ ವಿಸೃತ ವರದಿ ಸಲ್ಲಿಕೆಗೆ ಸಿದ್ಧತೆ ನಡೆಸಿದೆ. ಸಾವಿಗೆ ಕಾರಣವಾಗಿರುವ ಔಷಧ ಸರಬಾರಜು ಮಾಡಿರುವ ಕಂಪನಿಗಳ ವಿರುದ್ಧ 4 ಕ್ರಿಮಿನಲ್ ಕೇಸ್ ದಾಖಲಿಸುವಂತೆ ಅಧಿಕಾರಿಗಳು ವರದಿಯಲ್ಲಿ ಶಿಫಾರಸು ಮಾಡಲಿದ್ದಾರೆ.
ಐವಿ ಫ್ಲೂಯಿಡ್ ಉತ್ಪಾದನೆ, ಹಾಗೂ ಗ್ಲೂಕೋಸ್ನಲ್ಲಿ ವಿಷಕಾರಿ ಅಂಶ ಪತ್ತೆ ಹಿನ್ನೆಲೆ 4 ಕ್ರಿಮಿನಲ್ ಕೇಸ್ ದಾಖಲು ಶಿಫಾರಸು ಮಾಡಿದೆ. ಈ ಹಿಂದೆ ಐವಿ ಫ್ಲೂಯಿಡ್ ಬಳಕೆಗೆ ಯೋಗ್ಯ ಇದೆ ಎಂದು ಕೋರ್ಟ್ಗೆ ಕಂಪನಿ ವರದಿ ನೀಡಿತ್ತು. ಅದಾದ ಬಳಿಕ ರಾಜ್ಯದಲ್ಲಿ 6 ಜನ ಸಾವನ್ನಪ್ಪಿದ್ದಾರೆ. ಮೊದಲು ಸಾವಿಗೆ ಕಾರಣವಾಗಿರೋ ಫ್ಲೂಯಿಡ್ ಕುರಿತು ಕೇಸ್, ಮತ್ತೊಂದು ಉತ್ಪಾದನೆಯಲ್ಲಿ ಸಮಸ್ಯೆ ಕುರಿತು ಕೇಸ್, ಮತ್ತೊಂದು ವಿಷಕಾರಿ ಅಂಶ ಪತ್ತೆಯ ವರದಿಯನ್ನಾಧರಿಸಿ ಕೇಸ್ ದಾಖಲು ಮಾಡಲು ವರದಿಯಲ್ಲಿ ಸೂಚಿಸಲಾಗಿದೆ. ಒಟ್ಟು 4 ಕ್ರಿಮಿನಲ್ ಕೇಸ್ ದಾಖಲಿಸಿ ಬ್ಲಾಕ್ ಲಿಸ್ಟ್ಗೆ ಹಾಕಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತಾ ತಿಳಿಸಿದ್ದಾರೆ.