ವೇಣೂರು ಸನಿಹದ ಬರ್ಕಜೆ ನದಿಯಲ್ಲಿ ಮೂವರು ಮಕ್ಕಳು ನೀರುಪಾಲು
ಬೆಳ್ತಂಗಡಿ: ವೇಣೂರು ಸನಿಹದ ಗೆಳೆಯನ ಮನೆಗೆ ಬಂದಿದ್ದ ಮೂವರು ನರ್ಸಿಂಗ್ ವಿದ್ಯಾರ್ಥಿಗಳು ನಿಟ್ಟಡೆ ಗ್ರಾಮದ ಬರ್ಕಜೆ ಎಂಬಲ್ಲಿ ನದಿ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಬುಧವಾರ ಸಂಜೆ ಸಂಭವಿಸಿದೆ.
ಬಂಟ್ವಾಳ ತಾಲೂಕಿನ ವಗ್ಗ ಕಾಡಬಿಟ್ಟುವಿನ ಜೈಸನ್ (19), ಕುಪ್ಪೆಪದವು ವಿನ ಲಾರೆನ್ಸ್ (21) ಹಾಗೂ ಪುಂಜಾಲಕಟ್ಟೆ ಬಸವನಗುಡಿ ಯ ಸೂರಜ್ (19) ಮೃತ ಪಟ್ಟ ದುರ್ದೈವಿಗಳು.
ಸಾಂತ್ ಮಾರಿ ಹಿನ್ನಲೆಯಲ್ಲಿ ಇವರು ಗೆಳೆಯನ ಮನೆಗೆ ಬಂದಿದ್ದರು ಎನ್ನಲಾಗಿದ್ದು, ಬಳಿಕ ನದಿಯಲ್ಲಿ ಸ್ನಾನಕ್ಕೆ ಇಳಿದಿದ್ದರು. ಕಿಂಡಿ ಅಣೆಕಟ್ಟಿನ ಸಮೀಪ ಇವರು ಸ್ನಾನಕ್ಕೆ ಇಳಿದಿದ್ದು ನದಿ ನೀರಿನಲ್ಲಿ ಸಿಲುಕಿ ಮೂವರು ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು, ಅಗ್ನಿ ಶಾಮಕದಳದವರು ತೆರಳಿದ್ದು ಸ್ಥಳೀಯರ ಸಹಕಾರದೊಂದಿಗೆ ಮೃತದೇಹಗಳನ್ನು ಮೇಲೆತ್ತಲಾಗಿದೆ.
ಮೂವರೂ ವಿದ್ಯಾರ್ಥಿಗಳು ಮಂಗಳೂರಿನ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು ಎಂದು ತಿಳಿದುಬಂದಿದೆ. ಇನ್ನು ವಾಲ್ಟರ್ ಎಂಬುವವರ ಮನೆಯಲ್ಲಿದ್ದ ಕಾರ್ಯಕ್ರಮವೊಂದಕ್ಕೆ ಬಂದಿದ್ದ ವಿದ್ಯಾರ್ಥಿಗಳು ಒಟ್ಟಿಗೆ ಈಜಾಡಲು ತೆರಳಿ ಇದೀಗ ದುರಂತ ಅಂತ್ಯ ಕಂಡಿದ್ದಾರೆ.