ಅಂತ್ಯವಾಯ್ತು ನಟೋರಿಯಸ್ ನಕ್ಸಲ್ ಬದುಕು! ವಿಕ್ರಂ ಗೌಡ ಮೇಲೆ ಈಗಲೂ ಊರಿನವರಿಗಿದೆಯಂತೆ ಪ್ರೀತಿ!
20 ವರ್ಷಗಳ ಹಿಂದೆ ನಮ್ಮೊಟ್ಟಿಗೆ ಇದ್ದ, ತುಂಬಾ ಒಳ್ಳೆಯ ಹುಡುಗನಾಗಿದ್ದ. ಬಡಕುಟುಂಬದವನಾಗಿದ್ದನು. ಅವನು ಅನಿವಾರ್ಯವಾಗಿ ನಕ್ಸಲ್ ಗುಂಪಿಗೆ ಹೋದ ಅನಿಸುತ್ತದೆ. ಅವರ ಸಂಪರ್ಕಕ್ಕೆ ಹೋದಾಗಿನಿಂದ ನಮ್ಮ ಜೊತೆಯಾಗಲಿ ಊರಿನವರ ಜೊತೆಯಾಗಲಿ ಸಂಪರ್ಕಕ್ಕೆ ಬರಲೇ ಇಲ್ಲ. 20 ವರ್ಷಗಳ ನಂತರ ಇವತ್ತು ಅವನ ಮುಖ ನೋಡಿದ್ವಿ…
ಉಡುಪಿ: ನಕ್ಸಲ್ ನಿಗ್ರಹ ಪಡೆ (Anti-Naxal Force) ನಡೆಸಿದ ಕಾರ್ಯಾಚರಣೆಯಲ್ಲಿ ಹತನಾದ ನಕ್ಸಲ್ ನಾಯಕ ವಿಕ್ರಂ ಗೌಡ (Naxal leader Vikram Gowda) ಅಂತ್ಯಕ್ರಿಯೆಯನ್ನು, ಹೆಬ್ರಿ ತಾಲ್ಲೂಕಿನ ಕೂಡ್ಲು ನದಿಯ ತಟದಲ್ಲಿ ಮಾಡಲಾಯಿತು. ಕುಟುಂಬ ಗ್ರಾಮಸ್ಥರು ಆಪ್ತರು ಅಂತಿಮ ವಿಧಿ ವಿಧಾನದಲ್ಲಿ ಭಾಗಿಯಾದರು. 21 ವರ್ಷಗಳ ಬಳಿಕ ಗ್ರಾಮಸ್ಥರು ವಿಕ್ರಂ ಮುಖ ನೋಡಿದರು. ಈ ಮೂಲಕ ವಿಕ್ರಂ ಗೌಡನ ಎರಡು ದಶಕಗಳ ಬಂದೂಕಿನ ಹೋರಾಟದ ಅಧ್ಯಾಯ ಅಂತ್ಯವಾಯಿತು.
ಅವನು ನಕ್ಸಲರ ಸಂಪರ್ಕಕ್ಕೆ ಹೋದದ್ದು ನನಗೆ ಆರಂಭದಲ್ಲಿ ಗೊತ್ತಿರಲಿಲ್ಲ
ಖಾಸಗಿ ನ್ಯೂಸ್ ಚಾನೆಲ್ ಜೊತೆ ಮಾತನಾಡಿದ ವಿಕ್ರಂ ಗೌಡ ಸಹೋದರ ಸುರೇಶ ಗೌಡ ಅವರು, ನನ್ನ ಅಮ್ಮ ಅಪಘಾತದಲ್ಲಿ ಮೃತಪಟ್ಟಿದ್ದರು. ನಾನು ಮನೆಯಲ್ಲಿ ಇರಲಿಲ್ಲ ಸಣ್ಣಂದಿನಲ್ಲೇ ಮುಂಬೈಗೆ ಹೋಗಿದ್ದೇನೆ. ನಾನು ಹೊರಗಡೆ ಕೆಲಸ ಮಾಡಿಕೊಂಡಿದ್ದೆ ಕುಟುಂಬಸ್ಥರ ಜೊತೆ ಇರಲಿಲ್ಲ. ನಾನು ಈ ಊರು ಬಿಟ್ಟು ಮುಂಬೈ ಮತ್ತಿತರ ಕಡೆ ಕೆಲಸ ಮಾಡಿ 18 ವರ್ಷ ಆಯ್ತು. ನಾನು ನನ್ನ ಕುಟುಂಬದ ಜೊತೆ ಬೇರೆ ಇದ್ದೇನೆ. ಅವನು ನಕ್ಸಲರ ಸಂಪರ್ಕಕ್ಕೆ ಹೋದದ್ದು ನನಗೆ ಆರಂಭದಲ್ಲಿ ಗೊತ್ತಿರಲಿಲ್ಲ. ಆನಂತರದಲ್ಲಿ ಗೊತ್ತಾಯಿತು ಎಂದು ಹೇಳಿದರು.
ವಿಕ್ರಂ ಗೌಡ ಜೀವಂತ ಇದ್ದಾನೆ ಎಂಬ ಭರವಸೆ ನಮಗೆ ಇರಲಿಲ್ಲ
ವಿಕ್ರಂ ಗೌಡ ನಕ್ಸಲೀಯರ ಜೊತೆ ಹೋಗಿದ್ದಾನೆ ಎಂಬ ಮಾಹಿತಿ ಇತ್ತು. ಆತ ಇನ್ನು ಜೀವಂತ ಇದ್ದಾನೆ ಎಂದು ನಮಗೆ ಗೊತ್ತಿರಲಿಲ್ಲ. ವಿಕ್ರಂ ಗೌಡ ಜೀವಂತ ಇದ್ದಾನೆ ಎಂಬ ಭರವಸೆ ನಮಗೆ ಇರಲಿಲ್ಲ. ಎನ್ಕೌಂಟರ್ ಆಗಿದೆ ಎಂದು ಮಾಧ್ಯಮಗಳಲ್ಲಿ ನೋಡಿ ಗೊತ್ತಾಗಿದ್ದು. ಪೊಲೀಸರು ಫೋನ್ ಮಾಡಿ ಕರೆದರು ಅಲ್ಲಿ ಹೋಗಿ ನೋಡಿದೆವು. ಎಂದು ಅವರ ಸಹೋದರ ಹೇಳಿದರು.
ಶರಣಾಗತಿಯಾಗಿ ಊರಿಗೆ ಬರಬಹುದಿತ್ತು ಜೀವನ ಮಾಡಲು ಸಾಕಷ್ಟು ದಾರಿಗಳಿವೆ
ನಮಗೆ ಈವರೆಗೆ ಪೊಲೀಸರಿಂದ ಯಾರಿಂದಲೂ ಕಿರುಕುಳ ಆಗಿಲ್ಲ. ಕೆಲವು ಸಹಿ ಮಾಡಲು ರಿಪೋರ್ಟ್ ಗಾಗಿ ನಮ್ಮನ್ನು ಠಾಣೆಗೆ ಕರೆಸುತ್ತಾರೆ. ಪೊಲೀಸರು ಯಾವುದೇ ಕಿರುಕುಳ ಈವರೆಗೆ ನೀಡಿಲ್ಲ. ಯಾವುದೇ ತೊಂದರೆ ಮಾಡಿಲ್ಲ ನಮಗೆ ಯಾರು ಬೈದೂ ಇಲ್ಲ. ವಿಕ್ರಂ ಕಳೆದ 21 ವರ್ಷದಿಂದ ಊರಿಗೆ ಬಂದ ಮಾಹಿತಿ ನಮಗೆ ಇಲ್ಲ. ಶರಣಾಗತಿಯಾಗಿ ಊರಿಗೆ ಬರಬಹುದಿತ್ತು ಜೀವನ ಮಾಡಲು ಸಾಕಷ್ಟು ದಾರಿಗಳಿವೆ. ಬಂದು ಇದ್ದಿದ್ದರೆ ಬಹಳ ಚೆನ್ನಾಗಿತ್ತು ಎಂದು ಹೇಳುವ ಮೂಲಕ ಆತ ಸಶಸ್ತ್ರ ಹೋರಾಟ ಬಿಟ್ಟು ಬರಬೇಕಿತ್ತು ಎಂಬ ಆಶಯವನ್ನು ಸಹೋದರ ಸುರೇಶ್ ಗೌಡ ಹಂಚಿಕೊಂಡರು.
ಬಡಕುಟುಂಬದ ಹುಡುಗ ವಿಕ್ರಂ, ಒಳ್ಳೆಯ ಹುಡುಗ
ಇನ್ನು ಇದೇ ವೇಳೆ ಮಾತನಾಡಿದ ವಿಕ್ರಂನ ಬಾಲ್ಯ ಸ್ನೇಹಿತ ಮಹೇಶ್ ಅವರು, 20 ವರ್ಷಗಳ ಹಿಂದೆ ನಮ್ಮೊಟ್ಟಿಗೆ ಇದ್ದ, ತುಂಬಾ ಒಳ್ಳೆಯ ಹುಡುಗನಾಗಿದ್ದ. ಬಡಕುಟುಂಬದವನಾಗಿದ್ದನು. ಅವನು ಅನಿವಾರ್ಯವಾಗಿ ನಕ್ಸಲ್ ಗುಂಪಿಗೆ ಹೋದ ಅನಿಸುತ್ತದೆ. ಅವರ ಸಂಪರ್ಕಕ್ಕೆ ಹೋದಾಗಿನಿಂದ ನಮ್ಮ ಜೊತೆಯಾಗಲಿ ಊರಿನವರ ಜೊತೆಯಾಗಲಿ ಸಂಪರ್ಕಕ್ಕೆ ಬರಲೇ ಇಲ್ಲ. 20 ವರ್ಷಗಳ ನಂತರ ಇವತ್ತು ಅವನ ಮುಖ ನೋಡಿದ್ವಿ… ಅವನ ಜಮೀನು ಉಳಿಸಿಕೊಳ್ಳಲು ಇಲ್ಲಿಯೇ ಇದ್ದು ಹೋರಾಟ ಮಾಡಬಹುದಿತ್ತು ಆದರೆ ಅವನು ನಕ್ಸಲರ ಜೊತೆ ಹೋಗಬಾರದಿತ್ತು… ಈಗ ಅದೇ ಅವನಿಗೆ ಮುಳುವಾಯಿತು ಎಂದು ಬೇಸರ ವ್ಯಕ್ತಪಡಿಸಿದರು.