ಪಡಿತರ ಚೀಟಿ ರದ್ದು ವಿಚಾರ: ಒಂದೇ ಒಂದು ಎಪಿಎಲ್ ಕಾರ್ಡ್ ರದ್ದಾಗಿಲ್ಲ, ಮಂಗಳೂರಿನಲ್ಲಿ ಸಚಿವ ಮುನಿಯಪ್ಪ ಸ್ಪಷ್ಟನೆ
ಮಂಗಳೂರಿನಲ್ಲಿ ಮಾತನಾಡಿದ ಸಚಿವ ಕೆ.ಎಚ್. ಮುನಿಯಪ್ಪ, ಬಿಪಿಎಲ್ ಅಲ್ಲದವರನ್ನು ಎಪಿಎಲ್ ವರ್ಗಕ್ಕೆ ಸೇರ್ಪಡೆಗೊಳಿಸಲಾಗಿದೆ. ಪಡಿತರ ವಿತರಣೆಗೆ ಹಣದ ಕೊರತೆ ಇಲ್ಲ. ಅರ್ಹರಿಗೆ ಬಿಪಿಎಲ್ ಕಾರ್ಡ್ ನೀಡುವಲ್ಲಿ ಯಾವುದೇ ತೊಂದರೆ ಇಲ್ಲ ಎಂದು ಎಪಿಎಲ್ ಕಾರ್ಡ್ ರದ್ದತಿಯ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಮಂಗಳೂರು, ನವೆಂಬರ್ 16: ಪರಿಷ್ಕರಣೆ ಮಾಡಿದಾಗ ಬಿಪಿಎಲ್ ಅಲ್ಲದೇ ಇರೋರನ್ನು ಎಪಿಎಲ್ ಮಾಡಿದ್ದೇವೆ. ಎಪಿಎಲ್ಗೆ ಹಾಕಿದವರನ್ನು ರದ್ದು ಮಾಡುವುದಿಲ್ಲ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಸಚಿವ ಕೆಹೆಚ್ ಮುನಿಯಪ್ಪ (KH Muniyappa) ಹೇಳಿದ್ದಾರೆ. ರಾಜ್ಯದಲ್ಲಿ 11 ಲಕ್ಷ ಪಡಿತರ ಚೀಟಿ ರದ್ದಾಗಿದೆ ಎಂಬ ಬಿಜೆಪಿ ಶಾಸಕ ಸುನೀಲ್ ಕುಮಾರ್ ಹೇಳಿಕೆ ವಿಚಾರವಾಗಿ ನಗರದಲ್ಲಿ ಮಾತನಾಡಿದ ಅವರು, ಪಡಿತರ ನೀಡುವುದಕ್ಕೆ ಹಣದ ಕೊರತೆ ಇಲ್ಲ ಎಂದು ಹೇಳಿದ್ದಾರೆ.
ಎಪಿಎಲ್ಗೆ ಸಬ್ಸಿಡಿ ಕೊಡುವುದನ್ನು ನಿಲ್ಲಿಸಿದ್ದೇವೆ
ಅರ್ಹರಿಗೆ ಬಿಪಿಎಲ್ ಕಾರ್ಡ್ ವಿತರಣೆಗೆ ಯಾವುದೇ ತೊಂದರೆ ಇಲ್ಲ. ಎಪಿಎಲ್ನವರಿಗೆ ಸಬ್ಸಿಡಿ ರೇಟ್ನಲ್ಲಿ ಕೊಡ್ತಿದ್ದೆವು, ಹೆಚ್ಚಿನವರು ತೆಗೆದುಕೊಳ್ಳುತ್ತಿರಲಿಲ್ಲ. ಹಾಗಾಗಿ ಸದ್ಯಕ್ಕೆ ಎಪಿಎಲ್ಗೆ ಸಬ್ಸಿಡಿ ಕೊಡುವುದನ್ನು ನಿಲ್ಲಿಸಿದ್ದೇವೆ. ಪರಿಷ್ಕರಣೆ ಪೂರ್ತಿ ಆದ ಮೇಲೆ ಎಪಿಎಲ್ನವರು ಬೇಕೆಂದು ಮುಂದೆ ಬಂದ್ದರೆ ಖಂಡಿತಾ ಕೊಡುತ್ತೇವೆ ಎಂದು ತಿಳಿಸಿದ್ದಾರೆ.
ಒಂದೇ ಒಂದು ಎಪಿಎಲ್ ಕಾರ್ಡ್ ರದ್ದು ಆಗಿಲ್ಲ. ದಕ್ಷಿಣ ಭಾರತದಲ್ಲಿ ಅತೀ ಹೆಚ್ಚು ಕರ್ನಾಟಕದಲ್ಲಿ ಕಾರ್ಡ್ ಇದೆ. 6.50 ಕೋಟಿ ಜನ ಇದ್ದರೂ 4.50 ಕೋಟಿ ಜನರಿಗೆ ಕಾರ್ಡ್ ಕೊಟ್ಟಿದ್ದೇವೆ. ಅರ್ಹರಲ್ಲದವರು ಜಾಸ್ತಿ ಜನ ಇದ್ದಾರೆ ಎಂಬ ಭಾವನೆ ಬಂದಿದೆ.
ಸುನೀಲ್ ಕುಮಾರ್ ನನ್ನ ಬಳಿ ಕೇಳಿದ್ರೆ ಹೇಳುತ್ತೇನೆ ಎಂದ ಮುನಿಯಪ್ಪ
ಪರಿಷ್ಕರಣೆಗೆ ನಿಯಾಮವಳಿ ಹಾಕಿಕೊಂಡಿದ್ದೇವೆ. ಈ ಹಿಂದಿನ ಸರ್ಕಾರವೇ ಈ ನಿಯಮ ಮಾಡಿದೆ. ಆದಾಯ ತೆರಿಗೆ ಕಟ್ಟುವವರಿಗೆ, ಕಾರು ಇರುವವರಿಗೆಲ್ಲಾ ಅವರನ್ನು ಎಪಿಎಲ್ಗೆ ಹಾಕುತ್ತೇವೆ. ಅವರನ್ನು ತೆಗೆದು ಹಾಕಲ್ಲ. ಪರಿಷ್ಕರಣೆ ಮಾಡುವಾಗ ಅರ್ಹರಿಗೆ ಬಿಪಿಎಲ್ ಕೊಡುತ್ತೇವೆ. ನಮ್ಮ ಬಳಿ ಇದಕ್ಕಾಗಿ 8000 ಸಾವಿರ ಕೋಟಿ ಹಣ ರೂ. ಇದೆ. ತಿಂಗಳಿಗೆ 650 ಕೋಟಿಯೇ ಖರ್ಚು ಆಗಲ್ಲ. ಕೊಡೋದಕ್ಕೆ ಯಾವುದೇ ತೊಂದರೆ ಇಲ್ಲ. ಸುನೀಲ್ ಕುಮಾರ್ ಅವರಿಗೆ ಮನವರಿಕೆ ಮಾಡುತ್ತೇವೆ. ನನ್ನ ಬಳಿ ಕೇಳಿದರೆ ಹೇಳುತ್ತೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.