ಬೆಂಗಳೂರಿನಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿತ: ಮೂವರ ಶವ ಹೊರಕ್ಕೆ, ಮುಂದುವರಿದ ರಕ್ಷಣಾ ಕಾರ್ಯಾಚರಣೆ
ಕಳೆದ ನಾಲ್ಕೈದು ದಿನಗಳಿಂದ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಭಾರಿ ಪ್ರಮಾಣದ ಮಳೆಯಾಗುತ್ತಿದ್ದು, ಹಲವು ಏರಿಯಾಗಳಲ್ಲಿ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತವಾಗಿದೆ. ಈಗಾಗಲೇ ಹಿಂಗಾರು ಮಳೆ ಬೆಂಗಳೂರಿನಲ್ಲಿ ಸಾಕಷ್ಟು ಅವಾಂತರ ಸೃಷ್ಟಿಸಿದ್ದು, ಇಂದು(ಅಕ್ಟೋಬರ್ 22) ಸಹ ಮತ್ತೆ ಧಾರಾಕಾರ ಮಳೆ ಸುರಿಯುತ್ತಿದೆ. ಪರಿಣಾಮ ನಿರ್ಮಾಣ ಹಂತದ ಕಟ್ಟಡ ಕುಸಿದು ಬಿದ್ದಿದ್ದು, ಅವಶೇಷಗಳಡಿ 16 ಕಾರ್ಮಿಕರು ಸಿಲುಕಿದ್ದಾರೆ ಎನ್ನುವ ಮಾಹಿತಿ ಸಿಕ್ಕಿದೆ.
ಬೆಂಗಳೂರು, (ಅಕ್ಟೋಬರ್ 22): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೆ (ಅಕ್ಟೋಬರ್ 22) ಧಾರಾಕಾರ ಮಳೆ ಸುರಿಯುತ್ತಿದ್ದು, ಹೆಣ್ಣೂರು ಸಮೀಪದ ಬಾಬುಸಾಬ್ಪಾಳ್ಯದಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿದುಬಿದ್ದಿದೆ. ಇನ್ನು ಕಟ್ಟಡ ಅವಶೇಷಗಳಡಿ 16 ಕಾರ್ಮಿಕರು ಸಿಲುಕಿರಬಹುದು ಎಂದು ಟಿವಿ9 ವರದಿ ಮಾಡಿದ್ದು, ಸದ್ಯ ಅಗ್ನಿಶಾಮಕ ದಳ, ಪೊಲೀಸರು ಅವಶೇಷಗಳಡಿ ಸಿಲುಕಿದ್ದ ಮೂವರು ಕಾರ್ಮಿಕರ ಶವ ಹೊರತೆಗೆದಿದ್ದಾರೆ. ಇನ್ನು ಮೂವರನ್ನು ರಕ್ಷಣೆ ಮಾಡಿದ್ದು, ಇನ್ನುಳಿದಕಾರ್ಮಿಕರಿಗಾಗಿ ರಕ್ಷಣಾ ಕಾರ್ಯಾಚರಣೆ ಮುಂದುವರಿಸಿದ್ದಾರೆ.
ಕಟ್ಟಡ ಕುಸಿಯುತ್ತಿದ್ದಂತೆಯೇ ಅವಶೇಷಗಳಡಿಯಲ್ಲಿ ಸಿಲುಕಿದ್ದ ಕಾರ್ಮಿಕನೋರ್ವ ರಕ್ತ ಸಿಕ್ತ ಸ್ಥಿತಿಯಲ್ಲಿ ಆಚೆ ಬಂದಿದ್ದು, ಕಾರ್ಮಿಕನ ತಲೆಗೆ ಪೆಟ್ಟಾಗಿ ರಕ್ತ ಸೋರುತ್ತಿದೆ. ಇನ್ನು ರಕ್ತದ ಮಡುವಿನಲ್ಲೇ ಅಳುತ್ತ ನಮ್ಮವರು ಒಳಗೆ ಸಿಲುಕಿದ್ದಾರೆಂದು ಎಂದು ಮಾಹಿತಿ ನೀಡಿದ್ದಾನೆ. ಒಳಗೆ ಇನ್ನು ಕಾರ್ಮಿಕರು ಇದ್ದಾರೆ ಎನ್ನುವುದು ಖಚಿತವಾಗುತ್ತಿದ್ದಂತೆಯೇ ರಕ್ಷಣಾ ಕಾರ್ಯಚರಣೆ ಚುರುಕುಗೊಂಡಿದೆ.