ರಾಹುಲ್ ಗಾಂಧಿ ವಿರುದ್ಧ ಕ್ರಮಕ್ಕೆ ಕೋರಿದ್ದ ಪಿಐಎಲ್ ವಜಾ: ಅರ್ಜಿದಾರರಿಗೆ 25 ಸಾವಿರ ದಂಡ
ಪ್ರಜ್ವಲ್ ರೇವಣ್ಣ ಟೀಕಿಸುವ ಭರದಲ್ಲಿ ಮಹಿಳೆಯರ ಮಾನಹಾನಿ ಮಾಡಿದ್ದಾರೆ ಎನ್ನುವ ಆರೋಪ ಪ್ರಕರಣದಲ್ಲಿ ರಾಹುಲ್ ಗಾಂಧಿಗೆ ಬಿಗ್ ರಿಲೀಫ್ ಸಿಕ್ಕಿದೆ. ರಾಹುಲ್ ಗಾಂಧಿ ವಿರುದ್ಧ ಕ್ರಮ ಕೋರಿ ಸಲ್ಲಿಸಿದ್ದ ಪಿಐಎಲ್ ಅನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿ ದಂಡ ವಿಧಿಸಿದೆ.
ಬೆಂಗಳೂರು, (ಅಕ್ಟೋಬರ್ 21): ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಟೀಕಿಸುವ ಭರದಲ್ಲಿ ಮಹಿಳೆಯರ ಮಾನಹಾನಿ ಮಾಡಿದ್ದಾರೆ ಎಂದು ಆರೋಪಿಸಿ ರಾಹುಲ್ ಗಾಂಧಿ (Rahul Gandhi) ವಿರುದ್ಧ ಕ್ರಮ ಕೋರಿ ಸಲ್ಲಿಸಿದ್ದ ಸಾರ್ವಜನಿಕಾ ಹಿತಾಸಕ್ತಿ ಅರ್ಜಿಯನ್ನು (PIL) ಹೈಕೋರ್ಟ್ (High Court) ವಜಾಗೊಳಿಸಿದೆ. ಆಲ್ ಇಂಡಿಯಾ ದಲಿತ್ ಆ್ಯಕ್ಷನ್ ಕಮಿಟಿ ಸಲ್ಲಿಸಿದ್ದ ಪಿಐಎಲ್ ಅನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ. ಅಲ್ಲದೇ 25 ಸಾವಿರ ರೂ. ದಂಡ ವಿಧಿಸಿದೆ.
ಮುಖ್ಯ ನ್ಯಾ. ಎನ್.ವಿ.ಅಂಜಾರಿಯಾ, ನ್ಯಾ.ಕೆ.ವಿ.ಅರವಿಂದ್ ಅವರಿದ್ದ ಪೀಠ ಆಲ್ ಇಂಡಿಯಾ ದಲಿತ್ ಆ್ಯಕ್ಷನ್ ಕಮಿಟಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿ 25 ಸಾವಿರ ರೂ. ದಂಡ ವಿಧಿಸಿದೆ. ರಾಹುಲ್ ಭಾಷಣದ ಅರ್ಹತೆಯ ಬಗ್ಗೆ ನಾವು ಹೇಳುತ್ತಿಲ್ಲ. ಆದರೆ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗಳ ಅಡಿಯಲ್ಲಿ ಇದು ವಿಷಯವಾಗಿರಬಾರದು ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.