ಹೆಚ್.ಡಿ. ಕುಮಾರಸ್ವಾಮಿ ಆಪರೇಷನ್ ಸಕ್ಸಸ್: ಮಂಡ್ಯ ನಗರಸಭೆ ಚುನಾವಣೆಯಲ್ಲಿ ಜೆಡಿಎಸ್‌ಗೆ ಗೆಲುವು
ಮಂಡ್ಯ, ಆಗಸ್ಟ್ 29: ಮಂಡ್ಯ ನಗರಸಭೆ ಅಧ್ಯಕ್ಷ ಚುನಾವಣೆಯಲ್ಲಿ ಕಾಂಗ್ರೆಸ್ ಆಪರೇಷನ್ ವಿಫಲವಾಗಿದ್ದು, ಜೆಡಿಎಸ್ ಮತ್ತೆ ಗೆದ್ದು ಬೀಗಿದೆ. ಮಂಡ್ಯ ನಗರಸಭೆ ಅಧ್ಯಕ್ಷರಾಗಿ ನಾಗೇಶ್ ಹಾಗೂ ಉಪಾಧ್ಯಕ್ಷರಾಗಿ ಅರುಣ್ಕುಮಾರ್ ಆಯ್ಕೆಯಾಗಿದ್ದಾರೆ.
ಜೆಡಿಎಸ್ ಕೈ ತಪ್ಪಿ ಹೋಗುವ ಹಂತದಲ್ಲಿದ್ದ ನಗರಸಭೆ ಅಧಿಕಾರ ಸಂಸದ ಹಾಗೂ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಪ್ರವೇಶದಿಂದ ದಳದಲ್ಲೇ ಉಳಿದುಕೊಂಡಿದೆ. ಅಧಿಕಾರ ಹಿಡಿಯುವುದಕ್ಕೆ ಕಾಂಗ್ರೆಸ್ ನಡೆಸಿದ ಕರಾಮತ್ತುಗಳೆಲ್ಲವೂ ಕೈಗೂಡಲೇ ಇಲ್ಲ. ಕಾಂಗ್ರೆಸ್ ಸದಸ್ಯ ಟಿ.ಕೆ.ರಾಮಲಿಂಗು ಪಕ್ಷಾಂತರ ಮಾಡಿ ಜೆಡಿಎಸ್‌ಗೆ ಜೈ ಎಂದ ಪರಿಣಾಮ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ಒಂದು ಮತದಿಂದ ಜೆಡಿಎಸ್ ರೋಚಕ ಗೆಲುವು ಸಾಧಿಸಿ ಅಧಿಕಾರವನ್ನು ತನ್ನಲ್ಲೇ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು.