December 24, 2024

ಕುಮಾರಸ್ವಾಮಿಗೂ ಶುರುವಾಗತ್ತಾ ಪ್ರಾಸಿಕ್ಯೂಷನ್ ಸಂಕಷ್ಟ? ಯಾವ ಕೇಸ್? ಇಲ್ಲಿದೆ ವಿವರ

0

ಮುಡಾ ಪ್ರಕರಣದ ಕಾನೂನು ಸಂಘರ್ಷ ಹಾಗೂ ರಾಜಕೀಯ ಸಂಘರ್ಷ ಬೇರೆಯದೇ ದಿಕ್ಕಿಗೆ ಹೊರಳುತ್ತಿದೆ. ಇಡೀ ಬೆಳವಣಿಗೆಗಳ ಕೇಂದ್ರ ಬಿಂದು ಕೇವಲ ಸಿದ್ದರಾಮಯ್ಯ ಮಾತ್ರ ಅಲ್ಲವೇ ಅಲ್ಲ. ಕೇಂದ್ರ ಸಚಿವ ಎಚ್​​ಡಿ ಕುಮಾರಸ್ವಾಮಿ ವಿರುದ್ದವೂ ಚಕ್ರವ್ಯೂಹ ಹೆಣೆಯಲು ತೆರೆ ಮರೆಯಲಿ ಕಸರತ್ತು ಶುರುವಾಗಿದೆ.

 

ಬೆಂಗಳೂರು, (ಆಗಸ್ಟ್ 20): ಮುಡಾ ಪ್ರಕರಣದ ಆರೋಪ ಪ್ರತ್ಯಾರೋಪಗಳು ಶುರುವಾದಾಗ ಕೇಂದ್ರ ಬಿಂದುವಾಗಿ ಕಾಣಿಸಿಕೊಂಡಿದ್ದು ಕೇವಲ ಸಿದ್ದರಾಮಯ್ಯ ಮಾತ್ರವಲ್ಲ, ಮಾತಿನ ಸಮರದಲ್ಲಿ ಎಚ್​ಡಿ ಕುಮಾರಸ್ವಾಮಿ ಕೂಡ ಮುಡಾ ಪ್ರಕರಣದ ಕೇಂದ್ರ ಬಿಂದು. ಇದೀಗ ಇಡೀ ಪ್ರಕರಣದಲ್ಲಿ ಸಿದ್ದರಾಮಯ್ಯ ವಿರುದ್ದ ಷಡ್ಯಂತ್ರ ನಡೆದಿದೆ ಎಂದು ಆರೋಪ ಮಾಡುತ್ತಿರುವ ಕಾಂಗ್ರೆಸ್, ಇದೀಗ ಎಚ್​ಡಿ ಕುಮಾರಸ್ವಾಮಿ ವಿರುದ್ದ ಮುಗಿಬಿದ್ದಿದೆ. ನಿನ್ನೆ ಪ್ರತಿಭಟನೆ ವೇಳೆ ನವರಂಗಿ ನಕಲಿ ಸ್ವಾಮಿ ಎಂದು ಟೀಕಿಸಿದ್ದ ಡಿಕೆಶಿವಕುಮಾರ್ , ಕುಮಾರಸ್ವಾಮಿ ವಿರುದ್ದ ವಾಗ್ದಾಳಿಯನ್ನೇ ಮಾಡಿದ್ದರು. ಅದಕ್ಕೆ ಪೂರಕ ಎಂಬಂತೆ ಕುಮಾರಸ್ವಾಮಿ ವಿರುದ್ದ ಒಂದಿಷ್ಟು ಬೆಳವಣಿಗೆಗಳಾಗಿವೆ. ಮಾಜಿ ಸಿಎಂ, ಹಾಲಿ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿಗೂ ಕೂಡ ಪ್ರಾಸಿಕ್ಯುಷನ್ ನ ಸಂಕಷ್ಟ ಎದುರಾಗತ್ತಾ ಎಂಬ ಅನುಮಾನದ ಕಿಡಿ ಹೊತ್ತಿಕೊಂಡಿದೆ.

 

ಎಚ್​ಡಿ ಕುಮಾರಸ್ವಾಮಿ ವಿರುದ್ದ ಚಾರ್ಜ್ ಶೀಟ್ ಸಲ್ಲಿಸಲು ಲೋಕಾಯುಕ್ತ ಎಸ್ಐಟಿ ಇದೀಗ ಮತ್ತೆ ರಾಜಭವನದ ಮೊರೆ ಹೋಗಿದೆ. ಹೀಗಾಗಿ ರಾಜ್ಯಪಾಲರು ಸಹ ಇದೀಗ ಸಂದಿಗ್ಧ ಸ್ಥಿತಿಯಲ್ಲಿ ಸಿಲುಕಿದ್ದಾರೆ. ಯಾಕಂದ್ರೆ, ಮುಡಾ ಹಗರಣದಲ್ಲಿ ಯಾವುದೇ ತನಿಖಾ ವರದಿ ಇಲ್ಲದೇ ಟಿಜೆ ಅಬ್ರಾಹಂ ನೀಡಿದ ದೂರಿನ ಮೇರೆಗೆ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್​ಗೆ ಅನುಮತಿ ನೀಡಿದ್ದಾರೆ. ಇದೀಗ ಕುಮಾರಸ್ವಾಮಿ ವಿರುದ್ಧ ತನಿಖಾ ವರದಿ ಜೊತೆಗೆ ಜಾರ್ಜ್​ಶೀಟ್​ ಸಲ್ಲಿಕೆಗೆ ಅನುಮತಿ ನೀಡುವಂತೆ ಎಸ್​​ಐಟಿ, ರಾಜ್ಯಪಾಲರಿಗೆ ಮನವಿ ಮಾಡಿದೆ. ಇದರಿಂದ ರಾಜ್ಯಪಾಲರಿಗೆ ದಿಕ್ಕುತೋಚದಂತಾಗಿದ್ದು, ಒಂದು ವೇಳೆ ಚಾರ್ಜ್​​ ಶೀಟ್ ಸಲ್ಲಿಸಲು ರಾಜ್ಯಪಾಲರು ಅನುಮತಿ ನೀಡಿದರೆ ಕುಮಾರಸ್ವಾಮಿಗೂ ಸಂಕಷ್ಟ ಕಟ್ಟಿಟ್ಟ ಬುತ್ತಿ.

 

ಹಾಗಾದ್ರೆ ಏನಿದು ಕುಮಾರಸ್ವಾಮಿ ಪ್ರಕರಣ..?
2007 ರಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದ ಸಮಯದಲ್ಲಿ ಬಳ್ಳಾರಿಯ ಸಂಡೂರಿನಲ್ಲಿ ಶ್ರೀ ಸಾಯಿ ವೆಂಕಟೇಶ್ವರ ಮಿನರಲ್ಸ್​ (SSVM)​ ಕಂಪನಿಗೆ 550 ಹೆಕ್ಟರ್​ ಭೂಮಿಯನ್ನು ಗಣಿ ನಿಯಮಗಳನ್ನ ಉಲ್ಲಂಘನೆಮಾಡಿ ಮಂಜೂರು ಮಾಡಿರುವ ಆರೋಪವಿದೆ. 2011ರಲ್ಲಿ ಲೋಕಾಯುಕ್ತ ರಿಪೋರ್ಟನಲ್ಲಿ ನಿಯಮ ಉಲ್ಲಂಘನೆ ಬಗ್ಗೆ ವರದಿಯಲ್ಲಿ ಉಲ್ಲೇಖವಾಗಿತ್ತು. ಲೋಕಾಯುಕ್ತ , SIT ತನಿಖೆ ಮಾಡಿ 2023ರ ನಂಬರ್ 21 ರಂದು ಕುಮಾರಸ್ವಾಮಿ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ಕೋರಿ ರಾಜ್ಯಪಾಲರಿಗೆ ಪತ್ರ ಬರೆದಿತ್ತು. ಬಳಿಕ ರಾಜ್ಯಪಾಲರು ಜುಲೈ 29 ರಂದು ಲೋಕಾಯುಕ್ತ SITಗೆ ಪತ್ರ ಬರೆದು ಎಚ್​ಡಿ ಕುಮಾರಸ್ವಾಮಿ ವಿರುದ್ದದ ಆರೋಪಗಳಿಗೆ ಕೆಲ ಸ್ಪಷ್ಟನೆ ನೀಡುವಂತೆ ಪತ್ರ ಬರೆದಿದ್ದರು. ರಾಜ್ಯಪಾಲರು ಕೇಳಿದ್ದ ಸ್ಪಷ್ಟನೆಗಳಿಗೆ ನಿನ್ನೆ(ಆಗಸ್ಟ್​ 19) ಲೋಕಾಯುಕ್ತ SIT ಮುಖ್ಯಸ್ಥರು ಮತ್ತೊಮ್ಮೆ ವರದಿಯನ್ನು ನೀಡಿ ಕುಮಾರಸ್ವಾಮಿ ವಿರುದ್ದ ದೋಷಾರೋಪ ಪಟ್ಟಿಯನ್ನು ಸಲ್ಲಿಸಲು ಅನುಮತಿಯನ್ನು ಕೇಳಿದ್ದಾರೆ.

ಹೀಗಾಗಿ ಕಾಂಗ್ರೆಸ್ ನ ಆಕ್ರೋಶ ಎಚ್​​ಡಿ ಕುಮಾರಸ್ವಾಮಿ ವಿರುದ್ದ ಜೋರಾಗುತ್ತಿದೆ. ಕೇಂದ್ರ ಸಚಿವರಾಗಿರುವ ಕುಮಾರಸ್ವಾಮಿ ತಮ್ಮ ಪ್ರಭಾವ ಬಳಿಸಿಯೇ ರಾಜ್ಯಪಾಲರು ಸಿದ್ದರಾಮಯ್ಯ ವಿರುದ್ದ ಪ್ರಾಸಿಕ್ಯೂಷನ್​ಗೆ ನೀಡುವಂತೆ ಒತ್ತಡ ಹಾಕಿದ್ದಾರೆ ಎಂಬುದು ಕಾಂಗ್ರೆಸ್ ನಾಯಕರ ಆರೋಪ. ಇದರಿಂದ ಇದೀಗ ರಾಜ್ಯಪಾಲರು ಕುಮಾರಸ್ವಾಮಿ ವಿರುದ್ಧ ಪ್ರಾಸಿಕ್ಯೂಷನ್​ಗೆ ಅನುಮತಿ ನೀಡಬೇಕೆಂದು ಆಗ್ರಹಿಸಿತ್ತಿದ್ದಾರೆ.

ಇನ್ನು ನಿನ್ನೆ ಕೋರ್ಟ್ ನಲ್ಲಿ ಸಿದ್ದರಾಮಯ್ಯ ರಿಟ್ ಅರ್ಜಿ ವಿಚಾರಣೆ ವೇಳೆ ರಾಜ್ಯಪಾಲರ ಮುಂದೆ ಯಾವುದೇ ಪ್ರಾಸಿಕ್ಯುಷನ್ ಅನುಮತಿಯ ಅರ್ಜಿಗಳು ಪೆಂಡಿಂಗ್ ಇಲ್ಲ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಕೋರ್ಟ್ ಗಮನಕ್ಕೆ ತಂದಿದ್ದರು. ಈ ನಡುವೆಯೇ ಲೋಕಾಯುಕ್ತ ಎಚ್​ಡಿಕೆ ವಿರುದ್ದ ರಾಜ್ಯಪಾಲ ಅನುಮತಿ ಕೇಳಿದೆ. ಕುಮಾರಸ್ವಾಮಿ ವಿರುದ್ದ ಪ್ರಾಸಿಕ್ಯೂಷನ್ ಗೆ ನೀಡುವುದು ರಾಜ್ಯಪಾಲರ ವಿವೇಚನೆಗೆ ಬಿಟ್ಟಿದ್ದು. ಆದರೆ ಸಿದ್ದರಾಮಯ್ಯ ಪ್ರಕರಣದಲ್ಲಿ ರಾಜ್ಯಪಾಲರ ನಿರ್ಧಾರ ಅತ್ಯಂತ ಮಹತ್ವದ್ದಾಗಲಿದೆ. ಜೊತೆಗೆ ರಾಜಕೀಯ ಸಂಘರ್ಷಕ್ಕೆ ಮತ್ತೊಮ್ಮೆ ನಾಂದಿ ಹಾಡುವುದು ಗ್ಯಾರಂಟಿ.

Leave a Reply

Your email address will not be published. Required fields are marked *

ಇತ್ತೀಚಿನ ಸಂಪೂರ್ಣ ಸುದ್ದಿಗಳು