December 24, 2024

Independence Day 2024: ರಾಜ್ಯಗಳಿಗೆ ಅನುದಾನ ಹಂಚಿಕೆಯಲ್ಲಿ ತಾರತಮ್ಯ ಕೇಂದ್ರದ ವಿರುದ್ಧ ಸಿಎಂ ಕಿಡಿ, ಪೋಡಿಯಂ ಮೇಲಿದ್ದ ಬುಲೆಟ್ ಪ್ರೂಫ್ ತೆರವುಗೊಳಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ

0

ಬೆಂಗಳೂರು : ದೇಶಾದ್ಯಂತ 78ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ ಮನೆ ಮಾಡಿದೆ. ಮಾಣೆಕ್ ಷಾ ಪರೇಡ್ ಮೈದಾನದಲ್ಲಿ ಸಿಎಂ ಸಿದ್ದರಾಮಯ್ಯ ಧ್ವಜಾರೋಹಣ ಮಾಡಿದರು. ಧ್ವಜಾರೋಹಣ ಬಳಿಕ ಮಾಡಿದ ಭಾಷಣದಲ್ಲಿ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದರು. ಹಾಗೂ ತಮ್ಮ ಸರ್ಕಾರದ ಸಾಧನೆಗಳು, ಯೋಜನೆಗಳ ಬಗ್ಗೆ ವಿವರಣೆ ನೀಡಿದರು.

ದೇಶಾದ್ಯಂತ 78ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ, ಸಡಗರ ಮನೆ ಮಾಡಿದೆ. ಇಂದು ಬೆಳಗ್ಗೆ 9 ಗಂಟೆ ಸುಮಾರಿಗೆ ಮಾಣೆಕ್ ಷಾ ಪರೇಡ್ ಮೈದಾನದಲ್ಲಿ ಸಿಎಂ ಸಿದ್ದರಾಮಯ್ಯ ಧ್ವಜಾರೋಹಣ ಮಾಡಿದರು. ತೆರೆದ ಜೀಪಿನಲ್ಲಿ ಪರಿವೀಕ್ಷಣೆ ಮಾಡಿದರು. ಪೋಡಿಯಂ ಮೇಲಿದ್ದ ಬುಲೆಟ್ ಪ್ರೂಫ್ ತೆರವು ಮಾಡಲು ಸಿಎಂ ಸೂಚಿಸಿದ್ದು ಸಿಎಂ ಸೂಚನೆ ಮೇರೆಗೆ ಬುಲೆಟ್ ಪ್ರೂಫ್ ತೆರವು ಮಾಡಲಾಯಿತು.

 

ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ ಅನುದಾನ ಹಂಚಿಕೆ ಬಗ್ಗೆ ಸಿಎಂ ಭಾಷಣದಲ್ಲಿ ಪ್ರಸ್ತಾಪ ಮಾಡಿದರು. ಜನಕಲ್ಯಾಣ ಕಾರ್ಯಕ್ರಮಗಳ ಅನುಷ್ಠಾನ ರಾಜ್ಯದ ಜವಾಬ್ದಾರಿಯಾದರೆ, ಇವುಗಳಿಗೆ ಪೂರಕ ಸಂಪನ್ಮೂಲ ಒದಗಿಸುವುದು ಕೇಂದ್ರದ ಹೊಣೆಗಾರಿಕೆ. ಇತ್ತೀಚಿನ ವರ್ಷಗಳಲ್ಲಿ ಕೇಂದ್ರ ಈ ಆಶಯದಿಂದ ದೂರ ಸರಿಯುತ್ತಿದೆ. ರಾಜ್ಯಗಳಿಗೆ ಅನುದಾನ ಹಂಚಿಕೆಯಲ್ಲಿ ಕೇಂದ್ರದಿಂದ ತಾರತಮ್ಯವಾಗ್ತಿದೆ. ಕೇಂದ್ರ ಸರ್ಕಾರ ಸಂವಿಧಾನದ ಆಶಯಗಳನ್ನ ನಿರ್ಲಕ್ಷಿಸಿದೆ ಎಂದರು.

 

ರಾಜ್ಯಕ್ಕೆ ದೊರೆಯಬೇಕಾದ ಹಣಕಾಸಿನ ಪಾಲು ನೀಡಲು ಕೇಂದ್ರ ಮೀನಮೇಷ ಎಣಿಸುತ್ತಿದೆ. ಹಣ ಪಡೆಯಲು ಕೋರ್ಟ್​ ಮೊರೆ ಹೋಗುವ ಅನಿವಾರ್ಯತೆ ಎದುರಾಗಿದೆ. ಇದು ಜನಹಿತಕ್ಕೆ ಒಳ್ಳೆಯದಲ್ಲ. ರಾಜ್ಯಗಳು ಅಭಿವೃದ್ಧಿಯಾದರೆ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ. ಮುಂದಿನ ದಿನಗಳಲ್ಲಿ ರಾಜ್ಯಕ್ಕೆ ಅನುದಾನ ಬಿಡುಗಡೆಗೆ ಸಿಎಂ ಒತ್ತಾಯ ಮಾಡಿದರು.

 

ರಾಜ್ಯದ ಸಮಸ್ತ ಜನರ ಪರವಾಗಿ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸುತ್ತೇನೆ. ಲೋಕಸಭೆ ಚುನಾವಣೆಯಲ್ಲಿ ಮತದಾರರು ತಮ್ಮ ರಾಜಕೀಯ ಪ್ರಬುದ್ಧತೆ ಮೆರೆದಿದ್ದಾರೆ. ಪ್ರಜಾಪ್ರಭುತ್ವ ಯಾರ ಕೈಗೊಂಬೆಯಾಗಲು ಸಾಧ್ಯವಿಲ್ಲವೆಂಬ ಸಂದೇಶ ರವಾನೆ ಮಾಡಿದ್ದಾರೆ ಎಂದು ಮಾಣೆಕ್ ಷಾ ಪರೇಡ್​​ ಮೈದಾನದಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿದರು.

 

ಬೆಂಗಳೂರಿನಲ್ಲಿ ಟ್ರಾಫಿಕ್​ ಕಿರಿಕಿರಿ ತಪ್ಪಿಸಲು ಪೆರಿಫೆರಲ್ ರಿಂಗ್ ರೋಡ್ ಅನುಷ್ಠಾನಗೊಳಿಸಲು ದೃಢ ಸಂಕಲ್ಪ ಮಾಡಲಾಗಿದೆ. ಬೆಂಗಳೂರು ನಗರ ವಿಶ್ವದರ್ಜೆಯ ನಗರವಾಗಿ ಅಭಿವೃದ್ಧಿಪಡಿಸಲು ಬ್ರ್ಯಾಂಡ್​ ಬೆಂಗಳೂರು ಯೋಜನೆಯಡಿ 48,686 ಕೋಟಿ ನೀಡಿದ್ದೇವೆ. ನೀರಾವರಿ ಯೋಜನೆಗೆ ತ್ವರಿತಗತಿಯಲ್ಲಿ ಅನುಷ್ಠಾನಕ್ಕೆ ಹೆಚ್ಚಿನ ಅನುದಾನ ನೀಡಲಾಗುತ್ತಿದೆ. ಎತ್ತಿನಹೊಳೆ ಯೋಜನೆಗೆ 855.02 ಕೋಟಿ ವೆಚ್ಚ ಭರಿಸಲಾಗಿದೆ ಎಂದರು.

 

ಮೇಕೆದಾಟು ಯೋಜನೆ, ಕುಡಿಯುವ ನೀರಿನ ಯೋಜನೆ ಹಾಗೂ ಕಾಮಗಾರಿ ಮತ್ತು ಭೂಸ್ವಾಧೀನ ಪ್ರಕ್ರಿಯೆಗೆ ಬೇರೆಡೆ ಕಚೇರಿ ಸ್ಥಾಪನೆ ಮಾಡಲಾಗುವುದು. ಮಳೆ, ಪ್ರವಾಹದಿಂದ ಮನೆ ಕಳೆದುಕೊಂಡವರಿಗೆ ಪರಿಹಾರ ಜೊತೆಗೆ ಮನೆ ಹಂಚಿಕೆ. ಮಾನವ-ವನ್ಯ ಜೀವಿಗಳ ಸಂಘರ್ಷ ತಡೆಗಟ್ಟಲು 120 ಕಿ.ಮೀ. ರೈಲ್ವೆ ಬ್ಯಾರಿಕೇಡ್ ನಿರ್ಮಾಣ. 7 ಆನೆ ಟಾಸ್ಕ್ ಫೋರ್ಸ್, 2 ಚಿರತೆ ಟಾಸ್ಕ್ ಫೋರ್ಸ್ ರಚಿಸಲಾಗಿದೆ.

 

ವಸತಿ ಯೋಜನೆಯಡಿ 2.38 ಲಕ್ಷ ಮನೆಗಳನ್ನ ಪೂರ್ಣಗೊಳಿಸಲಾಗಿದೆ. ಅರ್ಧಕ್ಕೆ ನಿಂತಿದ್ದ ಮನೆಗಳ ನಿರ್ಮಾಣ ಕಾರ್ಯ ಮತ್ತೆ ಪ್ರಾರಂಭವಾಗಿದೆ. ಬರ ಪರಿಹಾರದ ವಿಚಾರದಲ್ಲಿ ಕೇಂದ್ರದ ತಾರತಮ್ಯ ಖಂಡಿಸಿದ ಸಿಎಂ, ಕೇಂದ್ರ ಸರ್ಕಾರ ರಾಜ್ಯಕ್ಕೆ ಬರಪರಿಹಾರದ ಹಣ ತಡವಾಗಿ ನೀಡಿದೆ. ಆದರೆ ಅದಕ್ಕೂ ಮೊದಲು ರಾಜ್ಯ ಸರ್ಕಾರವೇ ಅಗತ್ಯ ಕ್ರಮ ವಹಿಸಿದೆ ಎಂದರು.

 

ಬರಪೀಡಿತ ಜಿಲ್ಲೆಗಳ ಪ್ರತಿ ರೈತರಿಗೆ $2000ನಂತೆ 636.45 ಕೋಟಿ ಮಧ್ಯಂತರ ಪರಿಹಾರ ನೀಡಿದ್ದೇವೆ. ಪಶ್ಚಿಮ ಘಟ್ಟಗಳ ಜಿಲ್ಲೆಗಳ ಪರಿಸರ ಅಭಿವೃದ್ಧಿ ಸಮತೋಲನಕ್ಕೆ 100 ಕೋಟಿ ಮೊತ್ತದಲ್ಲಿ ಉಪಶಮನ ಕ್ರಮಗಳ ಜಾರಿ ಮಾಡಿದ್ದೇವೆ. ನಮ್ಮ ಸರ್ಕಾರ ಕೇವಲ ಐದು ಗ್ಯಾರಂಟಿಗಳಿಗಷ್ಟೇ ಸೀಮಿತವಾಗಿಲ್ಲ. ಮೈತ್ರಿ ಯೋಜನೆಯಡಿ ಪಿಂಚಣಿ ಮೊತ್ತ ಹೆಚ್ಚಿಸಲಾಗಿದೆ. ಹಾಲು ಉತ್ಪಾದಕರ ಖಾತೆಗೆ ಪ್ರೋತ್ಸಾಹ ಹಣ ನೀಡಲಾಗಿದೆ. ಗ್ರಾಮೀಣ ರಸ್ತೆಗಳ ಅಭಿವೃದ್ಧಿಗಾಗಿ 463.11 ಕೋಟಿ ನೀಡಿದ್ದೇವೆ ಎಂದರು.

Leave a Reply

Your email address will not be published. Required fields are marked *

ಇತ್ತೀಚಿನ ಸಂಪೂರ್ಣ ಸುದ್ದಿಗಳು