ಶನಿವಾರ, ಭಾನುವಾರವೂ ರಾಜ್ಯದ ಈ ಜಿಲ್ಲೆಗಳಲ್ಲಿ ಶಾಲಾ-ಕಾಲೇಜು ನಡೆಸಲು ನಿರ್ಧಾರ-ಕಾರಣ ಏನು?
ಮಂಗಳೂರು, ಆಗಸ್ಟ್, 12: ಭಾರೀ ಮಳೆ ಹಿನ್ನೆಲೆ ರಾಜ್ಯದ ಹಲವೆಡೆ ಮುಂಜಾಗ್ರತಾ ಕ್ರಮವಾಗಿ ಮಕ್ಕಳ ಹಿತದೃಷ್ಟಿಯಿಂದ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿತ್ತು. ಅದರಲ್ಲೂ ಅತೀ ಹೆಚ್ಚು ರಜೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೀಡಲಾಗಿದೆ. ಇನ್ನು ಇದೀಗ ಮಳೆ ತಗ್ಗಿದ ಹಿನ್ನೆಲೆ ಈ ಭಾಗದಲ್ಲಿ ಶನಿವಾರ, ಭಾನುವಾರವೂ ತರಗತಿ ನಡೆಸಲು ತೀರ್ಮಾನ ಮಾಡಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯಿಂದ ಈ ವರ್ಷ ಜಿಲ್ಲಾಡಳಿತ 13 ದಿನ ಶಾಲಾ ಕಾಲೇಜುಗಳಿಗೆ ರಜೆಗಳನ್ನು ನೀಡಿದ್ದು, ಈಗ ಈ ರಜೆಗಳನ್ನು ತುಂಬಲು ಶಿಕ್ಷಣ ಇಲಾಖೆ ನಿರ್ಧರಿಸಿದೆ. ಈ ಶೈಕ್ಷಣಿಕ ವರ್ಷದ 26 ಶನಿವಾರಗಳಲ್ಲೂ ಇಡಿ ದಿನ ತರಗತಿಗಳನ್ನು ನಡೆಸಲು ಚಿಂತನೆ ನಡೆಸುತ್ತಿದೆ.
ಕಳೆದ ಕೆಲವು ವರ್ಷಗಳಿಂದ ಭಾರೀ ಮಳೆ ಹಿನ್ನೆಲೆ ರಜೆ ನೀಡುವುದರಲ್ಲಿ ದಕ್ಷಿಣ ಕನ್ನಡ ಜಿಲ್ಲೆ ರಾಜ್ಯದಲ್ಲೇ ಮೊದಲ ಸ್ಥಾನ ಅಲಂಕರಿಸಿದೆ. ಇನ್ನು ಶೈಕ್ಷಣಿಕ ವರ್ಷದ ಆರಂಭದಲ್ಲೇ ಭಾರೀ ಮಳೆಯಿಂದಾಗಿ ಸರಣಿ ರಜೆಗಳನ್ನು ನೀಡಲಾಗಿದ್ದು, ಇದರಿಂದ ಈ ಭಾಗದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಹೊಡೆತ ಬಿದ್ದಂತಾಗಿದೆ. ಆದರೆ ಈ ರಜೆಗಳನ್ನು ತುಂಬಲು ಹೆಚ್ಚುವರಿ ತರಗತಿ ನಡೆಸಲು ಚಿಂತನೆ ನಡೆಸುತ್ತಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಪಿಯು ಕಾಲೇಜುಗಳಿಗೆ ಈ ಬಾರಿ ನೀಡಿರುವ ರಜೆಗಳನ್ನು ತುಂಬು ಶನಿವಾರ ಇಡೀ ದಿನ ಜೊತೆ ಭಾನುವಾರ ಕೂಡ ತರಗತಿ ನಡೆಸಲು ಚಿಂತನೆ ನಡೆಯುತ್ತಿದೆ. ಆದರೆ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಭಾನುವಾರ ಹೆಚ್ಚಾಗಿ ಸಿಇಟಿ, ನೀಟ್, ಜೆಇಇಯಂತಹ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಗಳಿಗೆ ಹೋಗುವುದರಿಂದ ಭಾನುವಾರ ಪಿಯು ತರಗತಿ ನಡೆಸುವುದು ಸಾಧ್ಯವಾಗುತ್ತಿಲ್ಲ ಎನ್ನುವ ಮಾತುಗಳು ಕೇಳಿಬರುತ್ತಿವೆ.
ಕೆಲವು ಕಾಲೇಜುಗಳು ಮಾತ್ರ ಶನಿವಾರ ಇಡೀ ದಿನ ತರಗತಿ ನಡೆಸಲು ಆರಂಭಿಸಿದರೆ, ಕೆಲವು ಕಾಲೇಜಿನವರು ಶೀಘ್ರ ನಿರ್ಧಾರ ಕೈಗೊಳ್ಳಲಿದ್ದಾರೆ. ಶಿಕ್ಷಣದಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪ್ರಮುಖ ಘಟ್ಟ ಆಗಿರುವುದರಿಂದ ಈ ಬಾರಿಯ ರಜೆಗಳು ತರಗತಿಗಳಿಗೆ ದೊಡ್ಡ ಹೊಡೆತ ನೀಡುವ ಸಾಧ್ಯತೆಯಿದೆ.
ಆದ್ದರಿಂದ ಎಸ್‌ಎಸ್‌ಎಲ್ ವಿದ್ಯಾರ್ಥಿಗಳಿಗೆ ಬೆಳಗ್ಗೆ ಒಂದು ಗಂಟೆ ಹಾಗೂ ಸಂಜೆ ಒಂದು ಗಂಟೆ ವಿಶೇಷ ತರಗತಿ ನಡೆಸಲು ಶಿಕ್ಷಣ ಇಲಾಖೆ ಶಾಲೆಗಳಿಗೆ ಸೂಚನೆ ನೀಡಿದೆ ಎಂದು ಡಿಡಿಪಿಯು ತಿಳಿಸಿದ್ದಾರೆ. ಮತ್ತೊಂದೆಡೆ ಪಿಯು ವಿದ್ಯಾರ್ಥಿಗಳಿಗೆ ಶನಿವಾರದ ತರಗತಿ ಸಾಕಾಗದೆ ಹೋದರೆ, ಭಾನುವಾರ ಅರ್ಧ ದಿನ ಆದರೂ ತರಗತಿ ನಡೆಸಿ ಪರೀಕ್ಷೆಯ ಮೊದಲು ಪಾಠಗಳನ್ನು ಪೂರ್ತು ಮಾಡಿ ಎಂದು ಸೂಚನೆ ನೀಡಿದೆ ಎಂದು ತಿಳಿದುಬಂದಿದೆ.
ಇನ್ನು ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಸರ್ಕಾರಿ ಅಧಿಕಾರಿಗಳು ಸೂಚನೆ ನೀಡುವ ಮೊದಲೇ ತರಗತಿ ಆರಂಭಿಸಿ ಪರೀಕ್ಷೆ ಮೊದಲೇ ಪಾಠಗಳನ್ನು ಪೂರ್ಣಗೊಳಿಸುತ್ತಾರೆ. ಖಾಸಗಿಯವರು ಆನ್‌ಲೈನ್ ಮೊರೆ ಹೋದರೂ ಕೂಡ ಅಷ್ಟೊಂದು ಪರಿಣಾಮಕಾರಿಯಾಗಿ ಮಾಡುವುದಿಲ್ಲ. ಆದ್ದರಿಂದ ಅವರು ಸಹ ಭೌತಿಕ ತರಗತಿಗಳನ್ನು ಮಾಡಲು ಮುಂದಾಗಿದ್ದರೆ ಎನ್ನಲಾಗಿದೆ.