ದೇವರನಾಡಿಗೆ ದೇವರೇ ಗತಿ! 200ರ ಗಡಿ ದಾಟಿದ ಸಾವಿನ ಸಂಖ್ಯೆ, ಭಾರೀ ಮಳೆಯ ನಡುವೆ ಮುಂದುವರಿದ ರಕ್ಷಣಾ ಕಾರ್ಯ
ಕೇರಳ (ಜು.31): ಕೇರಳದಲ್ಲಿ ಸರಣಿ ಭೂಕುಸಿತಕ್ಕೆ ಈವರೆಗೂ 200 ಮಂದಿ ಬಲಿಯಾಗಿದ್ದಾರೆ. ಪ್ರವಾಹದ ನೀರಿನಲ್ಲಿ ಶವಗಳು ತೇಲಿಬರುತ್ತಿದೆ. ವಯನಾಡ್ನ ಘಟನೆ ದೇಶವನ್ನೇ ದಿಗ್ಭ್ರಾಂತಗೊಳಿಸಿದೆ ಎಂದರೂ ತಪ್ಪಲ್ಲ.
ಪ್ರವಾಹ ಜಲಕ್ಕೆ ನೂರಾರು ಮಂದಿ ಬಲಿಯಾದ ವರದಿ ಬರುತ್ತಿವೆ. ಸಾವು ನೋವುಗಳ ಸಂಖ್ಯೆ ಇನ್ನಷ್ಟು ಏರಬಹುದು ಎಂದೂ ಹೇಳಲಾಗುತ್ತಿದೆ. ಈ ಘಟನೆ ಮಹಾದುರಂತದ ಸುಳಿವು ಕೊಟ್ಟಿದೆಯಷ್ಟೆ, ಮುಂದೆ ಮಹಾಕಂಟಕವೇ ಕಾದಿದೆ ಎಂದು ಹೇಳಲಾಗ್ತಿದೆ.
ಕೇರಳ ಅಂದ್ರೆ, ಸೌಂದರ್ಯಕ್ಕೆ ಮತ್ತೊಂದು ಹೆಸರು ಅನ್ನೋ ಹಾಗಿತ್ತು.. ಆದ್ರೆ ಈಗ, ಅದೇ ಕೇರಳ ಪ್ರಕೃತಿಯ ರೌದ್ರ ಪ್ರತಾಪಕ್ಕೆ ಬೆಚ್ಚಿಬಿದ್ದಿದೆ.. ನೂರಾರು ಜೀವಗಳ ಬಲಿಯಾಗಿದೆ.
ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ವಯನಾಡಿನ ಭೂಕುಸಿತ ಪೀಡಿತ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆಯನ್ನು ತೀವ್ರಗೊಳಿಸಲಾಗಿದ್ದು, 79 ಪುರುಷರು ಮತ್ತು 64 ಮಹಿಳೆಯರು ಸೇರಿದಂತೆ 144 ಮೃತದೇಹಗಳು ಪತ್ತೆಯಾಗಿವೆ. ಆದಾಗ್ಯೂ, 191 ಜನರು ಇನ್ನೂ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ ಮತ್ತು ಅವಶೇಷಗಳ ಅಡಿಯಲ್ಲಿ ಸಿಲುಕಿರುವ ವ್ಯಕ್ತಿಗಳು ಬದುಕಿರುವ ಬಗ್ಗೆಯೇ ಅನುಮಾನ ವ್ಯಕ್ತವಾಗಿದೆ. ಕಳೆದ ಎರಡು ದಿನಗಳಲ್ಲಿ 1592 ಜನರನ್ನು ರಕ್ಷಿಸಲಾಗಿದೆ, ಮುಂಬರುವ ಗಂಟೆಗಳಲ್ಲಿ ಇನ್ನೂ ಹೆಚ್ಚಿನ ಜನರನ್ನು ಸುರಕ್ಷಿತವಾಗಿ ಹೊರತೆಗೆಯುವ ನಿರೀಕ್ಷೆಯಿದೆ. ಅದೇ ಸಮಯದಲ್ಲಿ, ಭೂಕುಸಿತದಲ್ಲಿ ಸಿಲುಕಿರುವ 1386 ಜನರನ್ನು ರಕ್ಷಿಸಲಾಗಿದೆ ಮತ್ತು ಏಳು ಶಿಬಿರಗಳಿಗೆ ಅವರನ್ನು ಸ್ಥಳಾಂತರಿಸಲಾಗಿದೆ. 201 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, 91 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. 8017 ಜನರನ್ನು 82 ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಏಷ್ಯಾನೆಟ್ ನ್ಯೂಸ್ ವರದಿ ಮಾಡಿದೆ.
ಬುಡಕಟ್ಟು ಕುಟುಂಬಗಳನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ, ಸಂತ್ರಸ್ತರಿಗೆ ಸರ್ಕಾರವು ಆಹಾರ, ವಸತಿ ಮತ್ತು ವೈದ್ಯಕೀಯ ನೆರವು ನೀಡುತ್ತದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್ಡಿಆರ್ಎಫ್) ಸಿಬ್ಬಂದಿ, ಪೊಲೀಸರು, ಎಲ್ಲಾ ಮೂರು ಸಶಸ್ತ್ರ ಪಡೆಗಳು ಮತ್ತು ಸ್ಥಳೀಯರು ಸೇರಿದಂತೆ ತಜ್ಞರ ತಂಡ ರಕ್ಷಣಾ ಕಾರ್ಯಾಚರಣೆಯನ್ನು ನಡೆಸುತ್ತಿದೆ.
ವಯನಾಡ್ ಜಿಲ್ಲೆಯಾದ್ಯಂತ ಒಟ್ಟು 8017 ಜನರನ್ನು ಪ್ರಸ್ತುತ 82 ಪರಿಹಾರ ಶಿಬಿರಗಳಲ್ಲಿ ಇರಿಸಲಾಗಿದೆ. ಇದರಲ್ಲಿ 19 ಗರ್ಭಿಣಿಯರು ಸೇರಿದ್ದಾರೆ. ಮೆಪ್ಪಾಡಿಯಲ್ಲಿ 8 ಶಿಬಿರಗಳಲ್ಲಿ 421 ಕುಟುಂಬಗಳ 1486 ಮಂದಿ ಇದ್ದಾರೆ. ನದಿಯಲ್ಲಿ ತೇಲುತ್ತಿರುವ ಶವಗಳನ್ನು ಹೊರತೆಗೆಯಲು ಮತ್ತು ಮಲಪ್ಪುರಂ ಜಿಲ್ಲೆಗೆ ತಲುಪಲು ಸಿದ್ಧತೆಗಳು ನಡೆಯುತ್ತಿವೆ. ರಕ್ಷಣಾ ಕಾರ್ಯಾಚರಣೆಗಾಗಿ 1167 ಸಿಬ್ಬಂದಿಯ ತಂಡವನ್ನು ನಿಯೋಜಿಸಲಾಗಿದೆ. ಇವುಗಳಲ್ಲಿ 10 ಠಾಣಾಧಿಕಾರಿಗಳ ನೇತೃತ್ವದಲ್ಲಿ ಸಮೀಪದ ಜಿಲ್ಲೆಗಳಿಂದ 645 ಅಗ್ನಿಶಾಮಕ ದಳದ ಸಿಬ್ಬಂದಿ, 94 NDRF ಸಿಬ್ಬಂದಿ,167 ಡಿಎಸ್ಸಿ ಸಿಬ್ಬಂದಿ, ಸೇನೆಯ MEG ಯಿಂದ 153 ಸಿಬ್ಬಂದಿ, ಮಂಗಳವಾರ ರಕ್ಷಣಾ ಕಾರ್ಯಕ್ಕ ಆಗಮಿಸಿದ ಕೋಸ್ಟ್ ಗಾರ್ಡ್ ಸಿಬ್ಬಂದಿ ಈ ತಂಡದಲ್ಲಿದ್ದಾರೆ.
ಮಂಗಳವಾರ ಸಂಜೆ ವೇಳೆಗೆ ತಾತ್ಕಾಲಿಕ ಸೇತುವೆಯನ್ನು ಸ್ಥಾಪಿಸಲಾಗಿದ್ದು, ತ್ವರಿತ ರಕ್ಷಣಾ ಕಾರ್ಯಾಚರಣೆಗೆ ಅನುಕೂಲವಾಗಿದೆ. ಈ ಸೇತುವೆಯನ್ನು ಚೂರಲ್ಮಲದಿಂದ ಸಂತ್ರಸ್ಥರನ್ನು ಆಸ್ಪತ್ರೆಗೆ ಸಾಗಿಸಲು ಮತ್ತು ಹಿಂತಿರುಗಲು ಬಳಸಲಾಗುತ್ತಿದೆ. ವಾಯುಪಡೆ ಕೂಡ ಹೆಲಿಕಾಪ್ಟರ್ ಬಳಸಿ ಸಿಕ್ಕಿಬಿದ್ದವರನ್ನು ರಕ್ಷಿಸಿ ಆಸ್ಪತ್ರೆಗೆ ಸಾಗಿಸುತ್ತಿದೆ. ಇಂಟೆಲಿಜೆಂಟ್ ಬರಿಡ್ ಆಬ್ಜೆಕ್ಟ್ ಡಿಟೆಕ್ಷನ್ ಸಿಸ್ಟಮ್ಗಳನ್ನು ಬಳಸಿಕೊಂಡು ಬಂಡೆಗಳ ಅಡಿಯಲ್ಲಿ ಬದುಕುಳಿದವರ ಪತ್ತೆಹಚ್ಚಲು ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಇದಕ್ಕಾಗಿ ನಿವೃತ್ತ ಮೇಜರ್ ಜನರಲ್ ಇಂದ್ರಬಾಲನ್ ನೇತೃತ್ವದ ತಂಡದ ನೆರವು ಕೋರಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.