ವೇಣೂರು ಮುಖ್ಯ ಪೇಟೆಯಲ್ಲೇ ಭೂ ಕುಸಿತ, ಅಪಾಯದಲ್ಲಿ ಗ್ರಾಮ ಪಂಚಾಯತ್ ಕಟ್ಟಡ
ವೇಣೂರು : ವೇಣೂರು ಪೇಟೆಯ ಹೃದಯಭಾಗದಲ್ಲಿರುವ ವೇಣೂರು ಗ್ರಾಮ ಪಂಚಾಯತ್ ಕಛೇರಿ ಕಟ್ಟಡಗಳು ಅಪಾಯದ ಅಂಚಿನಲ್ಲಿದೆ.
. ಜುಲೈ 29 ಮತ್ತು 30ನೇ ತಾರೀಕಿನಂದು ಸುರಿದ ಭಾರೀ ಮಳೆಗೆ ಗ್ರಾಮ ಪಂಚಾಯತ್ ಕಛೇರಿಯ ಹಳೆಯ ಮತ್ತು ಹೊಸ ಕಟ್ಟಡದ ನೆಲದಡಿ ಕುಸಿಯಲಾರಂಭಿಸಿದ್ದು; ಗುಡ್ಡದ ಮಣ್ಣು ರಸ್ತೆಯನ್ನು ಆವರಿಸುತ್ತಿದೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಗ್ರಾಮ ಪಂಚಾಯತ್ ಕಛೇರಿ ಕಟ್ಟಡಗಳಿಗೆ ಅಪಾಯ ತಪ್ಪಿದ್ದಲ್ಲ ಎಂದು ಆತಂಕ ವ್ಯಕ್ತಪಡಿಸಿದ ಸ್ಥಳೀಯರು ತಾಲೂಕು ಆಡಳಿತ ಮತ್ತು ತಾಲೂಕು ಪಂಚಾಯತ್ ಅಧಿಕಾರಿಗಳು ತುರ್ತಾಗಿ ಇತ್ತ ಗಮನ ಹರಿಸಿ, ಸೂಕ್ತ ಅಗತ್ಯ ಕ್ರಮ ಕೈಗೊಂಡು ಸಂಭಾವ್ಯ ಅವಘಡ ತಪ್ಪಿಸಲಿ ಎಂದು ಆಗ್ರಹಿಸಿದ್ದಾರೆ. ಅಂತೆಯೇ ಗ್ರಾಮ ಪಂಚಾಯತ್ ಆಡಳಿತ ತುರ್ತಾಗಿ ಅಗತ್ಯ ಕ್ರಮ ಕೈಗೊಂಡು ಗ್ರಾಮ ಪಂಚಾಯತ್ ಕಛೇರಿ ಕಟ್ಟಡಗಳನ್ನು ರಕ್ಷಿಸಿಕೊಳ್ಳಲಿ ಎಂದು ಒತ್ತಾಯಿಸಿದ್ದಾರೆ.