ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣಕ್ಕೆ ಹೊರಟವರಿಗೆ ಶಾಕ್: ಖಾಸಗಿ ಬಸ್ ಟಿಕೆಟ್ ದರ ದುಪ್ಪಟ್ಟು
ಬೆಂಗಳೂರು ಮಂಗಳೂರು ರೈಲು ಸಂಚಾರ ಸ್ಥಗಿತಗೊಂಡಿರುವುದು ಖಾಸಗಿ ಬಸ್ನವರಿಗೆ ವರವಾಗಿ ಪರಿಣಮಿಸಿದೆ! ಆದರೆ, ಪ್ರಯಾಣಿಕರನ್ನು ಸಂಕಷ್ಟಕ್ಕೆ ದೂಡಿದೆ. ಇದೇ ತಕ್ಕ ಸಮಯವೆಂದುಕೊಂಡ ಖಾಸಗಿ ಬಸ್ಗಳು ಇದೀಗ ಮಂಗಳೂರು, ಧರ್ಮಸ್ಥಳ, ಸುಬ್ರಹ್ಮಣ್ಯಕ್ಕೆ ಟಿಕೆಟ್ ದರವನ್ನು ಎರಡ್ಮೂರು ಪಟ್ಟು ಹೆಚ್ಚಿಸಿವೆ. ಈಗೆಷ್ಟಿದೆ ಬಸ್ ಟಿಕೆಟ್ ದರ ಎಂಬ ಮಾಹಿತಿ ಇಲ್ಲಿದೆ.
ಬೆಂಗಳೂರು, ಜುಲೈ 29: ಬೆಂಗಳೂರು ಮಂಗಳೂರು ನಡುವಣ ರೈಲು ಸಂಚಾರ ಸ್ಥಗಿತಗೊಂಡಿರುವುದು ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ ದೇಗುಲಗಳಿಗೆ ತೆರಳುವ ಭಕ್ತರ ಸಂಕಷ್ಟಕ್ಕೆ ಕಾರಣವಾಗಿದೆ. ಖಾಸಗಿ ಬಸ್ಗಳು ಬೇಕಾಬಿಟ್ಟಿಯಾಗಿ ಟಿಕೆಟ್ ದರ ನಿಗದಿಪಡಿಸುತ್ತಿದ್ದು, ಪರಿಣಾಮವಾಗಿ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಮಂಗಳೂರು ಕಡೆ ತೆರಳುವ ಬಸ್ ಟಿಕೆಟ್ ದರ ದುಬಪ್ಪಟ್ಟು ಹಾಗೂ ಅದಕ್ಕಿಂತಲೂ ಹೆಚ್ಚಾಗಿರುವುದು ಗೊತ್ತಾಗಿದೆ.
ರಾಜ್ಯಾದ್ಯಂತ ಭಾರಿ ಮಳೆಯಿಂದ ಹಲವಡೆ ಭೂಕುಸಿತವಾಗಿದೆ. ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಎಡಕುಮೇರಿ ಬಳಿ ರೈಲು ಹಳಿ ಇರುವ ಜಾಗದಲ್ಲಿ ಭೂಕುಸಿತ ಉಂಟಾಗಿ ರೈಲು ಸಂಚಾರ ಸ್ಥಗಿತಗೊಂಡಿದೆ. ಒಟ್ಟಾರೆಯಾಗಿ 14 ರೈಲುಗಳ ಸಂಚಾರ ಸ್ಥಗಿತಗೊಂಡಿದೆ.
ಖಾಸಗಿ ಬಸ್ ಟಿಕೆಟ್ ದರ ಎಷ್ಟಿದೆ?
ಬೆಂಗಳೂರಿನಿಂದ ಮಂಗಳೂರಿಗೆ ಖಾಸಗಿ ಬಸ್ ಟಿಕೆಟ್ ದರ ದುಪ್ಪಟ್ಟಾಗಿದ್ದು, ಕೆಲವು ಬಸ್ಗಳಂತೂ ಎರಡ್ಮೂರು ಪಟ್ಟು ದರ ಏರಿಕೆ ಮಾಡಿವೆ. ಉಭಯ ನಗರಗಳ ಮಧ್ಯೆ ಬಸ್ ಪ್ರಯಾಣಕ್ಕೆ 500-600 ರೂ. ಇದ್ದ ಟಿಕೆಟ್ ದರ ಈಗ 1000 ರೂ.ನಿಂದ 1,200 ರೂ.ಗೆ ಏರಿಕೆಯಾಗಿದೆ.
ಎಸಿ ಬಸ್ ಟಿಕೆಟ್ ದರ 2000 ರೂ.ನಿಂದ 4000 ರೂ.ಗೆ ಏರಿಕೆಯಾಗಿದೆ. ಪರಿಣಾಮವಾಗಿ ಧರ್ಮಸ್ಥಳ ಹಾಗೂ ಕುಕ್ಕೆ ಸುಬ್ರಹ್ಮಣ್ಯ ಕಡೆ ಹೊರಟ ಜನರಿಗೆ ತೊಂದರೆಯಾಗಿದೆ.
ಇದೇ ಮೊದಲಲ್ಲ
ಅನಿವಾರ್ಯ ಸಂದರ್ಭಗಳಲ್ಲಿ ಬೆಂಗಳೂರು ಮಂಗಳೂರು ಖಾಸಗಿ ಬಸ್ಗಳು ಟಿಕೆಟ್ ದರ ವಿರೀತ ಏರಿಕೆ ಮಾಡುತ್ತಿರುವುದು ಇದೇ ಮೊದಲಲ್ಲ. ಹಬ್ಬಗಳ ಸಂದರ್ಭ, ಸರಣಿ ರಜೆಗಳ ಸಂದರ್ಭದಲ್ಲಿ ಖಾಸಗಿ ಬಸ್ಗಳು ಟಿಕೆಟ್ ದರವನ್ನು ಎರಡ್ಮೂರು ಪಟ್ಟು ಏರಿಕೆ ಮಾಡುತ್ತವೆ. ಇದರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕೆಂಬ ಆಗ್ರಹವೂ ಪ್ರತಿ ಬಾರಿ ವ್ಯಕ್ತವಾಗುತ್ತಿದೆ. ಆದರೆ, ಟಿಕೆಟ್ ದರ ಏರಿಕೆ ಮುಂದುವರಿದೇ ಇದೆ.