“ಕುರಿ ಮಾಂಸದ ಹೆಸರಲ್ಲಿ ನಾಯಿ ಮಾಂಸ ಮಾರಿದರೆ ಹೆಚ್ಚು ಆತಂಕಿತರಾಗಬೇಕಾಗಿದ್ದು ಮುಸ್ಲಿಂ ಸಮುದಾಯ”
ಕರ್ನಾಟಕದ ಬಹುತೇಕ ಮುಸ್ಲೀಮರಿಗೆ ನಾಯಿ ಹರಾಮ್. (ಧಾರ್ಮಿಕ ಗ್ರಂಥಗಳಲ್ಲಿ ಅಂತಹ ಉಲ್ಲೇಖ ಇಲ್ಲ) ನಾಯಿಯ ಮಾಂಸ ಮಾರೋದು ಬಿಡಿ, ಒಂದು ಬಾರಿ ನಾಯಿಯನ್ನು ಮುಟ್ಟಿದರೆ 7 ಬಾರಿ ಸ್ನಾನ ಮಾಡಬೇಕು ಎಂಬ ನಂಬಿಕೆ ಬಹುತೇಕ ಮುಸ್ಲೀಮರಲ್ಲಿದೆ. ಹಾಗಾಗಿ ಕುರಿ ಮಾಂಸದ ಹೆಸರಲ್ಲಿ ನಾಯಿ ಮಾಂಸ ಮಾರಿದರೆ ಹೆಚ್ಚು ಆತಂಕಿತರಾಗುವುದು ಮುಸ್ಲಿಂ ಸಮುದಾಯವೇ ಆಗಿದೆ. ವಿಪರ್ಯಾಸವೆಂದರೆ ಹಿಂದೂ ಸಂಘಟನೆಗಳು, ಸಾಮಾಜಿಕ ಜಾಲತಾಣದ ಕೋಮುವಾದಿಗಳು “ನಾಯಿ ಮಾಂಸ ವಿವಾದ”ವನ್ನು ಮುಸ್ಲೀಮರ ತಲೆಗೆ ಕಟ್ಟುತ್ತಿವೆ.
ಕರ್ನಾಟಕದಲ್ಲಿ ನಾಯಿ ಮಾಂಸ ಮಾರಾಟ ಮಾಡಲಾಗುತ್ತಿದೆ ಎಂಬ ವಿವಾದ ಎದ್ದಿದ್ದು ಇದೇ ಮೊದಲಲ್ಲ. ಈ ಹಿಂದೆ ನಿಜವಾಗಿಯೂ ನಾಯಿ ಮಾಂಸ ಮಾರಾಟ ಮಾಡಿ ಅರೆಸ್ಟ್ ಆಗಿದ್ದ ಪ್ರಕರಣಗಳು ನಡೆದಿವೆ.
ಜನವರಿ 30, 2023 ರಂದು ಕಾರವಾರದಲ್ಲಿ ಹಂದಿ ಮಾಂಸ ಎಂದು ನಾಯಿ ಮಾಂಸವನ್ನು ಮಾರಾಟ ಮಾಡಲಾಗುತ್ತಿತ್ತು. ಪೊಲೀಸರು ಮತ್ತು ಆಹಾರ ಇಲಾಖೆಯವರು ದಾಳಿ ಮಾಡಿ ಮಾಂಸ ಮತ್ತು 4 ಆರೋಪಿಗಳನ್ನು ಬಂಧಿಸಿ ಜೈಲಿಗೆ ಹಾಕಿದ್ದರು. ಆರೋಪಿಗಳ ಪೈಕಿ ಒಬ್ಬನೇ ಒಬ್ಬ ಮುಸ್ಲೀಮನಾಗಲೀ, ಕ್ರಿಶ್ಚಿಯನ್ನರಾಗಲೀ ಇರಲಿಲ್ಲ.
ಜೂನ್ 27, 2023 ರಂದು ಮೈಸೂರಿನ ಕೆ ಆರ್ ನಗರದ ಪ್ರಭುಶಂಕರ ಬಿಲ್ಡಿಂಗ್ ನ ಗಣೇಶ್ ರೆಸ್ಟೋರೆಂಟ್ ನಲ್ಲಿ ನಾಯಿ ಮಾಂಸದ ಖಾದ್ಯ ಮಾರಾಟ ಮಾಡುತ್ತಿದ್ದಾರೆ ಎಂದು ದೂರು ಬಂದ ಹಿನ್ನಲೆಯಲ್ಲಿ ತಹಶೀಲ್ದಾರರು ಮತ್ತು ಆಹಾರ ಇಲಾಖೆ ಅಧಿಕಾರಿಗಳು ದಾಳಿ ಮಾಡಿ ಹೊಟೇಲ್ ಗೆ ಬೀಗ ಹಾಕಿದ್ದಾರೆ. ಈ ಹೊಟೇಲ್ ಮುಸ್ಲೀಮರಿಗಾಗಲೀ, ಕ್ರಿಶ್ಚಿಯನ್ನರಿಗಾಗಲೀ ಸೇರಿದ್ದಲ್ಲ.
ಈವರೆಗೆ ಪೊಲೀಸರು ಎಫ್ಐಅರ್ ದಾಖಲಿಸಿದ ನಾಯಿ ಮಾಂಸ ಎಫ್ಐಆರ್ ಗಳಲ್ಲಿ ಮುಸ್ಲೀಮರ ಹೆಸರಿಲ್ಲ. ಆದರೆ ಈವರೆಗೆ ಯಾವ ಮುಸ್ಲಿಂ ಸಂಘಟನೆಯೂ “ಹಿಂದೂಗಳ ಮಾಂಸಾಹಾರಿ ಹೊಟೇಲ್ ಗೆ ಹೋಗಬೇಡಿ” ಎಂದು ಕರೆ ನೀಡಿಲ್ಲ. ಅಥವಾ ಹಿಂದೂ ಮಟನ್ ಸ್ಟಾಲ್ ಗಳಿಂದ ಮಾಂಸ ತೆಗದುಕೊಳ್ಳಬೇಡಿ ಎಂದು ಅಭಿಯಾನ ಮಾಡಿಲ್ಲ.
ಕುರಿ ಮಾಂಸ ಬದಲಿಗೆ ವಂಚನೆಯಿಂದ ನಾಯಿ ಮಾಂಸ ಮಾರಾಟ ಮಾಡಿದರೆ ಅದು ಕಾನೂನು ಪ್ರಕಾರ ತಪ್ಪು. ಅದನ್ನು ಪೊಲೀಸರು ಮತ್ತು ಆರೋಗ್ಯ ಇಲಾಖೆ ನೋಡಿಕೊಳ್ಳುತ್ತದೆ. ಆದರೆ ನಾಯಿ ಕಂಡರೆ ಮಾರುದ್ದ ದೂರ ನಿಲ್ಲುವ, ನಾಯಿಯನ್ನು ಹರಾಮ್ ಎಂದು ನಂಬಿಕೆಯಿಂದ ನೋಡುವ ಸಮುದಾಯವನ್ನೇ ನಾಯಿ ಮಾಂಸದ ಆರೋಪಿಯನ್ನಾಗಿ ನೋಡುವುದು ವಿಪರ್ಯಾಸ !
– ನವೀನ್ ಸೂರಿಂಜೆ