ಮುಸ್ಲಿಂ ಧರ್ಮಕ್ಕೆ ಪರಿವರ್ತನೆಯಾದ ನಟಿ ಸಂಜನಾ ಗಲ್ರಾನಿ! ಅನಿವಾರ್ಯತೆಯ ಬಗ್ಗೆ ನಟಿ ಏನಂದ್ರು?
ಬೆಂಗಳೂರು, ಜುಲೈ 22: ನಟಿ ಸಂಜನಾ ಗಲ್ರಾನಿ ಸ್ಯಾಂಡಲ್‌ವುಡ್ ಡ್ರಗ್ಸ್ ಪ್ರಕರಣದಲ್ಲಿ ಸಿಸಿಬಿ ವಶದಲ್ಲಿರುವಾಗ ಅವರ ವೈಯಕ್ತಿಕ ಜೀವನದ ರಹಸ್ಯವೊಂದು ಬಯಲಾಗಿತ್ತು. ಈ ಸಮಯದಲ್ಲೇ ವೈದ್ಯ ಅಜೀಜ್ ಜೊತೆ ನಟಿ ಮದುವೆಯಾಗಿರುವ ವಿಚಾರ ಹೊರ ಬಿದ್ದಿತ್ತು. ಮುಸ್ಲಿಂ ಸಂಪ್ರದಾಯದಲ್ಲಿ ನಟಿ ಸಂಜನಾ ಗಲ್ರಾನಿ ಮದುವೆಯಾಗಿದ್ದಾರೆ ಎನ್ನುವ ಫೋಟೋ ಕೂಡ ವೈರಲ್ ಆಗಿತ್ತು.
ಜೈಲಿನಿಂದ ಹೊರಬಂದ ಬಳಿಕ ಈ ಬಗ್ಗೆ ನಟಿ ಸಂಜನಾ ಗಲ್ರಾನಿ ಸ್ಪಷ್ಟನೆ ನೀಡಿದ್ದರು. ಹಿರಿಯರ ಆಶೀರ್ವಾದದೊಂದಿಗೆ ಸಂಜನಾ ಗಲ್ರಾನಿ ಹಾಗೂ ಅಜೀಜ್ ವಿವಾಹವಾಗಿದ್ದರು. ಈ ದಂಪತಿಗೆ ಈಗ ಮುದ್ದಾದ ಮಗನಿದ್ದಾನೆ. ಇದೀಗ ಅಜೀಜ್ ಅವರ ಕೈ ಹಿಡಿದ ಸಂಜನಾ ಗಲ್ರಾನಿ ಮುಸ್ಲಿಂಗೆ ಪರಿವರ್ತನೆಯಾಗುವ ಅನಿವಾರ್ಯತೆ ಏನಿತ್ತು? ಎನ್ನುವ ಪ್ರಶ್ನೆಗೆ ನಟಿ ಉತ್ತರಿಸಿದ್ದಾರೆ.
ನ್ಯಾಷನಲ್ ಟಿವಿ ಜೊತೆಗಿನ ಸಂದರ್ಶನದಲ್ಲಿ ಮಾತನಾಡಿದ ಸಂಜನಾ ಗಲ್ರಾನಿ, ನಾನು ಅವರನ್ನು ಮದುವೆ ಆಗುವ ಸಮಯದಲ್ಲಿ ಅವರ ಅಮ್ಮನಿಗೆ ೮೨ ವರ್ಷ ಆಗಿತ್ತು. ಅವರ ಅಮ್ಮ ನನಗೆ ತುಂಬಾನೇ ಕ್ಲೋಸ್ ಆಗಿದ್ದರು. ಅವರಲ್ಲಿ ಒಂದಾಗಬೇಕು ಅಂದರೆ ಹಿರಿಯರ ಆಲೋಚನೆ ಹಾಗೆಯೇ ಇರುತ್ತದೆ. ಅವರ ಮೇಲೆ ಇದ್ದ ಪ್ರೀತಿ, ಗೌರವದಿಂದ ಆದೆ ಎಂದರು.
ಇನ್ನು ಪ್ರೀತಿ ಎನ್ನುವುದು ಪರಿಶುದ್ಧವಾದದು. ಒಂದು ಸಹಿ ಮಾಡುವುದಿಂದ ನಾನು ಮುಸ್ಲಿಂ ಆಗಿ ಹಿಂದೂ ದೇವಸ್ಥಾನಗಳಿಗೆ ಹೋಗಲಾಗುವುದಿಲ್ಲ ಎನ್ನುವುದನ್ನು ನಾನು ಎಂದೂ ಯೋಚಿಸುವುದಿಲ್ಲ. ಹಿಂದೂ ಹಾಗೂ ಮುಸ್ಲಿಂ ನನ್ನ ಎರಡು ಕಣ್ಣುಗಳು ಅನಿಸುತ್ತದೆ. ಈ ಸ್ಯಾಂಡಲ್‌ವುಡ್ ಡ್ರಗ್ಸ್ ಪ್ರಕರಣದಲ್ಲಿ ನನ್ನ ಎಷ್ಟು ಕೈ ಹಿಡಿದಿದ್ದಾರೆ ಎಂದರೆ, ನನಗೂ ಅವರಿಗೂ ಗೊತ್ತು ನಾವು ಎಷ್ಟೆಲ್ಲಾ ಅನುಭವಿಸಿದ್ದೇವೆ ಅಂತಾ. ಇಷ್ಟೆಲ್ಲಾ ಮಾಡಿದವರಿಗೆ ಒಂದು ಸಹಿ ಹಾಕುವುದರಿಂದ ನಾನೇನು ಚಿಕ್ಕವಳಾಗಲ್ಲ ಅನಿಸಿತು.
ಇದು ಪಬ್ಲಿಕ್‌ಗೆ ಆಚೆ ಹೋಗುತ್ತೆ ಅಂತಾ ನಾನು ಅಂದುಕೊಂಡಿರಲಿಲ್ಲ. ಟ್ರೋಲರ್ಸ್‌ಗಳಿಗೆ ಬೇರೆ ಏನು ಕೆಲಸ ಇದೆ. ಟ್ರೋಲರ್ಸ್ ಹತ್ತಿರ ಎಷ್ಟು ಸಮಯ ಇರುತ್ತದೆ ಅಂತಾ ನನಗೆ ಅರ್ಥನೇ ಆಗುವುದಿಲ್ಲ. ನಾನು ಸಂಸ್ಕೃತಿಯನ್ನು ಗೌರವಿಸುತ್ತೇನೆ. ಕೊನೆಗೂ ದೇವರು ಒಂದೇ. ಮುಸ್ಲಿಂ- ಹಿಂದೂ ಅಂತಾ ಅಷ್ಟೆಲ್ಲಾ ವ್ಯತ್ಯಾಸ ಸೃಷ್ಟಿಯಾಗುತ್ತಲ್ಲ. ಆದರೆ ಮುಸ್ಲೀಂಮರ ಒಳ್ಳೆ ಜನ. ಹಿಂದೂಗಳು ಒಳ್ಳೆ ಜನರು ಎಂದರು.
ಎರಡೂ ನಂಬಿಕೆಗಳು ಒಂದೇ ಅಂದ ಮೇಲೆ ನಿಮ್ಮ ಗಂಡನನ್ನೇ ಹಿಂದೂ ಧರ್ಮಕ್ಕೆ ಪರಿವರ್ತನೆ ಮಾಡಬಹುದಿತ್ತಲ್ಲ ಎನ್ನುವ ಪ್ರಶ್ನೆಗೆ ಉತ್ತರಿಸಿದ ನಟಿ ಸಂಜನಾ, ನಾನು ನನ್ನ ಗಂಡನನ್ನು ಅತಿಯಾಗಿ ಗೌರವಿಸುತ್ತೇನೆ. ಮುಸ್ಲಿಂ ಸಂಸ್ಕೃತಿಗೆ ಪರಿವರ್ತನೆ ಆಗು ಅಂತಾ ನನ್ನ ಗಂಡ ಯಾವತ್ತೂ ನನಗೆ ಹೇಳಿಲ್ಲ. ನನಗೆ ಆ ಪರಿವಾರದಲ್ಲಿ ಒಬ್ಬಳಾಗಬೇಕಿತ್ತು. ಅವರಲ್ಲೇ ಒಬ್ಬಳಾಗಬೇಕಿತ್ತು ಅಂತಾ ಅವರ ಖುಷಿಗೊಸ್ಕರ ನಾನು ಮಾಡಿದೆ.
ನಾನು ಬಹಳ ಖುಷಿಯಿಂದಲೇ ಇದನ್ನು ಮಾಡಿದ್ದೇನೆ. ನನ್ನ ಮೇಲೆ ಯಾರ ಒತ್ತಡವೂ ಇಲ್ಲ. ನನಗೆ ಈ ರೀತಿ ಮಾಡು ಅಂತಾ ಯಾರೂ ಹೇಳಲಿಲ್ಲ. ಮಾಡಲೇಬೇಕು ಎನ್ನುವ ಒತ್ತಡವೂ ಇರಲಿಲ್ಲ. ಇದು ಮಾಡಿದರೆ ಚೆನ್ನಾಗಿರುತ್ತಾರೆ ಅಂತಾ ಹಿರಿಯರು ಹೇಳಿದರು. ಹೀಗಾಗಿ ನಾನು ಖುಷಿಯಿಂದಲೇ ಸಹಿ ಮಾಡಿದ್ದೇನೆ ಎಂದು ಹೇಳಿದರು.