ಕರ್ನಾಟಕದ ಶಾಲಾ ಮಕ್ಕಳಿಗೆ ಗುಡ್ ನ್ಯೂಸ್: ವಾರದಲ್ಲಿ 6 ದಿನವೂ ಸಿಗಲಿದೆ ಮೊಟ್ಟೆ!
ಬೆಂಗಳೂರು ಜುಲೈ 18: ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳಿಗೆ ವಾರದಲ್ಲಿ ಆರು ದಿನ ಬೇಯಿಸಿದ ಮೊಟ್ಟೆ ನೀಡಲು ಅಜೀಂ ಪ್ರೇಮ್‌ಜಿ ಫೌಂಡೇಷನ್ ಮುಂದೆ ಬಂದಿದೆ.
ಇದಕ್ಕಾಗಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯೊಂದಿಗೆ ಅಜೀಂ ಪ್ರೇಮ್‌ಜಿ ಫೌಂಡೇಷನ್ ಕೈಜೋಡಿಸಿದೆ. ವಾರದಲ್ಲಿ 6 ದಿನ ಶಾಲಾ ಮಕ್ಕಳಿಗೆ ಮೊಟ್ಟೆ ನೀಡಲು ಅಜೀಂ ಪ್ರೇಮ್‌ಜಿ ಫೌಂಡೇಷನ್ 1,500 ಕೋಟಿ ರೂಪಾಯಿ ದೇಣಿಗೆ ನೀಡಲು ಮುಂದಾಗಿದೆ.
ಸರ್ಕಾರ ಮತ್ತು ಅಜೀಂ ಪ್ರೇಮ್‌ಜಿ ಫೌಂಡೇಶನ್ ನಡುವಿನ ಔಪಚಾರಿಕ ಒಪ್ಪಂದಕ್ಕೆ ಶನಿವಾರ ಸಹಿ ಹಾಕುವ ಸಾಧ್ಯತೆಯಿದೆ. ಒಪ್ಪಂದದಲ್ಲಿ ನೀಡುವ ದೇಣಿಗೆಯನ್ನು ಪ್ರಸ್ತುತ ಎರಡು ದಿನಗಳಿಗಿಂತ ವಾರದಲ್ಲಿ ಆರು ದಿನ ಬೇಯಿಸಿದ ಮೊಟ್ಟೆಗಳನ್ನು ಪೂರೈಸಲು ಬಳಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
1ರಿಂದ 10ನೇ ತರಗತಿವರೆಗಿನ ಮಕ್ಕಳಿಗೆ ವಾರಕ್ಕೆ ಎರಡು ದಿನ ಮೊಟ್ಟೆ ವಿತರಣೆ ಮಾಡಲಾಗುತ್ತಿದೆ. ಕಳೆದ ಶೈಕ್ಷಣಿಕ ಸಾಲಿನಲ್ಲಿ 38.37 ಲಕ್ಷ ಮಕ್ಕಳು ಮೊಟ್ಟೆಗೆ ಬೇಡಿಕೆ ಸಲ್ಲಿಸಿದ್ದರು. ಉಳಿದ ಮಕ್ಕಳಿಗೆ ಶೇಂಗಾ ಚಿಕ್ಕಿ, ಬಾಳೆ ಹಣ್ಣು ನೀಡಲಾಗಿತ್ತು.