ಐಪಿಸಿ ಬದಲು ಬಿಎನ್‌ಎಸ್‌ನಲ್ಲಿ ಕೇಸ್ ದಾಖಲಿಸಿ: ಹೈಕೋರ್ಟ್ ಎಲ್ಲಾ ಪೊಲೀಸ್ ಅಧಿಕಾರಿಗಳಿಗೆ ಜಾಗೃತಿ ಮೂಡಿಸಲು ಸೂಚನೆ
ಬೆಂಗಳೂರು, ಜುಲೈ 14: ಇನ್ನು ಮುಂದೆ ಭಾರತೀಯ ದಂಡ ಸಂಹಿತೆ (ಐಪಿಸಿ) ಬದಲು ಭಾರತೀಯ ನ್ಯಾಯ ಸಂಹಿತೆಯಡಿಯಲ್ಲೇ ಅಪರಾಧ ಪ್ರಕರಣಗಳನ್ನು ದಾಖಲಿಸಬೇಕು ಎಂದು ಕರ್ನಾಟಕ ಹೈಕೋರ್ಟ್ ಆದೇಶಿಸಿದೆ. ಅಲ್ಲದೆ, ಹೊಸ ಅಪರಾಧ ಕಾನೂನುಗಳನ್ವಯ ಎಲ್ಲಾ ಕೇಸ್ ದಾಖಲಿಸಲು ಎಲ್ಲಾ ಪೊಲೀಸ್ ಅಧಿಕಾರಿಗಳಿಗೆ ಜಾಗೃತಿ ಮೂಡಿಸಬೇಕೆಂದು ಸೂಚನೆ ನೀಡಿದೆ.
ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯಪೀಠ, ಜುಲೈ 1ರಂದು ನಡೆದಿದ್ದ ಅಪರಾಧ ಪ್ರಕರಣವನ್ನು ಬಿಎನ್‌ಎಸ್ ಬದಲಿಗೆ ಐಪಿಸಿ ಅಡಿಯಲ್ಲೇ ದಾಖಲಿಸಿದ್ದನ್ನು ಗಮನಿಸಿ ಈ ಆದೇಶ ನೀಡಿದೆ. ದೇಶಾದ್ಯಂತ ಜುಲೈ 1ರಿಂದಲೇ ಜಾರಿಗೆ ಬರುವಂತೆ ಬಿಎನ್‌ಎಸ್ ಜಾರಿಗೊಳಿಸಲಾಗಿದೆ.
ಹೈಕೋರ್ಟ್ ಆದೇಶವೇನು?: ಭೂ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಗೀತಾ ಎಂಬುವರು ದಾಖಲಿಸಿದ್ದ ಅರ್ಜಿಯನ್ನು ಆಲಿಸಿದ ನ್ಯಾಯಾಲಯವು, “ಐಪಿಸಿ ಮತ್ತು ಬಿಎನ್‌ಎಸ್‌ನಲ್ಲಿ ಸ್ವಲ್ಪ ಬದಲಾವಣೆಯಾಗುತ್ತದೆ. ಕೆಲ ಸೆಕ್ಷನ್‌ಗಳ ನಂಬರ್ ಬದಲಾಗುತ್ತದೆ. ಐಪಿಸಿಯಡಿ ಸೆಕ್ಷನ್ 427 ದುರ್ನಡತೆ ಆರೋಪದ್ದಾಗಿದ್ದರೆ, ಬಿಎನ್‌ಎಸ್‌ನಲ್ಲಿ ಸೆಕ್ಷನ್ 322ರಲ್ಲಿಆ ಆರೋಪ ಬರುತ್ತದೆ. ಅದೇ ರೀತಿ ಐಪಿಸಿ ಸೆಕ್ಷನ್ 447 ರಲ್ಲಿರುವ ಅತಿಕ್ರಮಣ ಆರೋಪ ಬಿಎನ್‌ಎಸ್‌ನಲ್ಲಿ 327ರಲ್ಲಿ ಬರುತ್ತದೆ” ಎಂದು ಹೇಳಿದೆ.
ಅಲ್ಲದೆ, ಜುಲೈ 1ರಿಂದ ಅನ್ವಯವಾಗುವಂತೆ ಹೊಸ ಮೂರು ಅಪರಾಧ ಕಾನೂನುಗಳು ಜಾರಿಯಾಗಿದ್ದು, ಅದರಂತೆ ಇನ್ನು ಮುಂದೆ ಐಪಿಸಿ ಬದಲು ಬಿಎನ್‌ಎಸ್ ಅಡಿ ಪ್ರಕರಣಗಳನ್ನು ದಾಖಲಿಸಬೇಕು. ಈ ಕುರಿತು ಪೊಲೀಸರಿಗೆ ಸೂಕ್ತ ಜಾಗೃತಿ ಮೂಡಿಸಬೇಕು ಎಂದು ಹೇಳಿರುವ ನ್ಯಾಯಾಲಯ, ಅರ್ಜಿದಾರರ ವಿರುದ್ಧದ ಪ್ರಕರಣದ ತನಿಖೆಗೆ ತಡೆ ನೀಡಿದೆ.
ಪ್ರಕರಣದ ಹಿನ್ನೆಲೆ: ಅರ್ಜಿದಾರರು ತಮ್ಮ ಭೂಮಿಯ ಮ್ಯುಟೇಷನ್ ಮಾಡಿಕೊಡುವಂತೆ ನಿರ್ದೇಶನ ನೀಡಬೇಕೆಂದು ಅರ್ಜಿ ಸಲ್ಲಿಸಿದ್ದರು. ನ್ಯಾಯಾಲಯ ಆನ್‌ಲೈನ್‌ನಲ್ಲಿಅರ್ಜಿ ಸಲ್ಲಿಸುವಂತೆ ಸೂಚಿಸಿ ಅರ್ಜಿ ವಿಲೇವಾರಿ ಮಾಡಿತ್ತು.
ಆದರೆ ಕಂದಾಯ ಅಧಿಕಾರಿಗಳು ನ್ಯಾಯಾಲಯದ ಆದೇಶ ಪಾಲಿಸಲು ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಅರ್ಜಿದಾರರು ನ್ಯಾಯಾಂಗ ನಿಂದನೆ ದಾವೆ ಹೂಡಿದ್ದರು. ಈ ಮಧ್ಯೆ, ಭೂ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಅರ್ಜಿದಾರರು ಐಪಿಸಿ ಸೆಕ್ಷನ್ 447, 427, 504 ಮತ್ತು 114ರಡಿ ಜುಲೈ 1ರಂದು ದೂರು ಸಲ್ಲಿಸಿದ್ದರು.
ಪೊಲೀಸರು ವಾಸ್ತವವಾಗಿ ಹೊಸ ಅಪರಾಧ ಕಾನೂನುಗಳು ಜುಲೈ 1ರಿಂದ ಜಾರಿಗೆ ಬಂದಿದ್ದರಿಂದ ಐಪಿಸಿ ಬದಲು ಬಿಎನ್‌ಎಸ್ ಅಡಿ ಎಫ್‌ಐಆರ್ ದಾಖಲಿಸಬೇಕಿತ್ತು. ಆದರೆ ಆ ಪೊಲೀಸರು ತಿಳಿದೋ ತಿಳಿಯದೆಯೋ ಐಪಿಸಿ ಸೆಕ್ಷನ್‌ನಡಿಯೇ ಎಫ್‌ಐಆರ್ ದಾಖಲಿಸಿದ್ದರು.
3 ಹೊಸ ಕಾನೂನುಗಳು: ಮೂರು ಹೊಸ ಅಪರಾಧ ಕಾನೂನೂಗಳು ಜಾರಿಗೆ ಬಂದ ಬಳಿಕ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, “ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ-2023, ಭಾರತೀಯ ನ್ಯಾಯ ಸಂಹಿತಾ-2023 ಮತ್ತು ಭಾರತೀಯ ಸಾಕ್ಷಿ ಅಧಿನಿಯಮ್-2023 ಸಂಸತ್‌ನಲ್ಲಿ ಅಂಗೀಕಾರಗೊಂಡಿದ್ದು ಭಾರತದ ಐತಿಹಾಸಿಕ ಕ್ಷಣ” ಎಂದು ಹೇಳಿದ್ದಾರೆ.
“ಈ ಕಾನೂನುಗಳು ವಸಾಹತುಶಾಹಿ ಯುಗದ ಕಾನೂನುಗಳ ಅಂತ್ಯವನ್ನು ಸೂಚಿಸುತ್ತವೆ. ಸಾರ್ವಜನಿಕ ಸೇವೆ ಮತ್ತು ಕಲ್ಯಾಣ ಕೇಂದ್ರಿತ ಕಾನೂನುಗಳೊಂದಿಗೆ ಹೊಸ ಯುಗ ಪ್ರಾರಂಭವಾಗುತ್ತಿದೆ. ತಂತ್ರಜ್ಞಾನ ಮತ್ತು ನ್ಯಾಯ ವಿಜ್ಞಾನದ ಮೇಲೆ ಕೇಂದ್ರೀಕೃತವಾಗುವ ಮೂಲಕ ನಮ್ಮ ಕಾನೂನು, ಪೊಲೀಸಿಂಗ್ ಮತ್ತು ತನಿಖಾ ವ್ಯವಸ್ಥೆಗಳನ್ನು ಆಧುನಿಕ ಯುಗಕ್ಕೆ ಬರುತ್ತದೆ” ಎಂದು ತಿಳಿಸಿದ್ದಾರೆ.