ನಿಟ್ಟಡೆ ಕುಂಭಶ್ರೀ ಪದವಿ ಪೂರ್ವ ಕಾಲೇಜು: ವಿದ್ಯಾರ್ಥಿ ಸಂಘದ ಉದ್ಘಾಟನೆ, ಪ್ರಮಾಣವಚನ ಸ್ವೀಕಾರ
ಕುಕ್ಕೇಡಿ : ನಿಟ್ಟಡೆ ಕುಂಭಶ್ರೀ ಪದವಿ ಪೂರ್ವ ಕಾಲೇಜು ಇಲ್ಲಿನ 2024-25ನೇ ಸಾಲಿನ ವಿದ್ಯಾರ್ಥಿ ಸಂಘದ ಉದ್ಘಾಟನಾ ಕಾರ್ಯಕ್ರಮವು ಜು. 11ರಂದು ನಡೆಯಿತು.
ಪೆರಿಂಜೆ SDM ಅನುದಾನಿತ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಮುಕುಂದ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ, ನಮ್ಮ ವ್ಯಕ್ತಿತ್ವವನ್ನು ಅಳವಡಿಸುವುದರಲ್ಲಿ ಪಿಯು ವಿದ್ಯಾಭ್ಯಾಸವು ಬಹು ಪ್ರಾಮುಖ್ಯವಾದ ಘಟ್ಟವಾಗಿದೆ ಎಂದರು. ವೇಣೂರು ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಜಯಂತ್ ಪೂಜಾರಿ ಉಪಸ್ಥಿತರಿದ್ದರು.
ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಶ್ವಿತ್ ಕುಲಾಲ್ ಮಾತನಾಡಿ, ವಿದ್ಯಾರ್ಥಿಗಳು ಯಾವತ್ತೂ ಸಂಶೋಧನಾಶೀಲರಾಗಿರಬೇಕು ಮತ್ತು ಅದನ್ನು ಪ್ರಸ್ತುತ ಪಡಿಸುವ ಜಾಣತನ ಬೆಳೆಸಿಕೊಳ್ಳಬೇಕು. ಮೆದುಳಿಗೆ ಉತ್ತಮ ಆಲೋಚನೆಗಳ ಮೂಲಕ ಹೆಚ್ಚು ಹೆಚ್ಚು ಕೆಲಸ ಕೊಟ್ಟಂತೆ ಅದು ಮತ್ತಷ್ಟು ಚುರುಕು ಆಗುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಸಂಸ್ಥೆಯ ಸಂಸ್ಥಾಪಕರಾದ ಗಿರೀಶ್ ಕೆ.ಎಚ್. ಅವರು ವಿದ್ಯಾರ್ಥಿ ಸಂಘದ ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿ, ವಿದ್ಯಾರ್ಥಿಗಳಿಗೆ ಪ್ರೇರಕವಾದ ನುಡಿಮುತ್ತುಗಳೊಂದಿಗೆ ತನ್ನ ಜೀವನದ ಸಾಧನೆಗಳನ್ನು ವಿದ್ಯಾರ್ಥಿಗಳಿಗೆ ತಿಳಿಯಪಡಿಸಿದರು.
ವಿದ್ಯಾರ್ಥಿಸಂಘದ ಪದಾಧಿಕಾರಿಗಳಿಗೆ ಪ್ರಮಾಣವಚನ
ಕಾಲೇಜು ವಿದ್ಯಾರ್ಥಿ ಸಂಘದ ನಾಯಕಿಯಾಗಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ಸಮೀಕ್ಷಾ, ಉಪನಾಯಕರುಗಳಾಗಿ ಪ್ರಥಮ ಪಿಯುಸಿ ವಾಣಿಜ್ಯ ವಿಭಾಗದ ಶಶಾಂಕ್, ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ಶಾನ್ ಆಯ್ಕೆ ಆಗಿದ್ದಾರೆ. ಉಳಿದಂತೆ 18 ಮಂದಿ ವಿದ್ಯಾರ್ಥಿಗಳು ಸಂಪುಟದ ವಿವಿಧ ನಾಯಕರಾಗಿ ಪ್ರಮಾಣವಚನ ಸ್ವೀಕರಿಸಿದರು. ಕಾಲೇಜಿನ ಪ್ರಾಂಶುಪಾಲೆ ಓಮನಾ ಅವರು, ವಿದ್ಯಾರ್ಥಿಗಳಿಗೆ ನಾಯಕತ್ವದ ಮಹತ್ವವನ್ನು ವಿವರಿಸಿದರು.
ವಾಣಿಜ್ಯ ವಿಭಾಗದ ಉಪನ್ಯಾಸಕಿ ಮೇಘಶ್ರೀ ಸ್ವಾಗತಿಸಿ, ರಸಾಯನಶಾಸ್ತ್ರ ವಿಭಾಗದ ಉಪನ್ಯಾಸಕಿ ಸುಶ್ಮಿತಾ ವಂದಿಸಿದರು.
ಕಾರ್ಯಕ್ರಮವನ್ನು ಜೀವಶಾಸ್ತ್ರ ವಿಭಾಗದ ಉಪನ್ಯಾಸಕ ಮನೋಜ್ ನಿರ್ವಹಿಸಿದರು.