ಪ್ರೇಯಸಿಯೊಡನೆ ಜಗಳವಾಡಿ ಅರ್ಧಕ್ಕೆ ಬಸ್ ನಿಲ್ಲಿಸಿ ಹೊರಟುಹೋದ ಚಾಲಕ!: ಸಂಕಷ್ಟ ಅನುಭವಿಸಿದ ಪ್ರಯಾಣಿಕರು
ಉಡುಪಿ, ಜುಲೈ 05: ಖಾಸಗಿ ಬಸ್ ಚಾಲಕ ಮಹಾಶಯನೊಬ್ಬ ತನ್ನ ಪ್ರೇಯಸಿಯೊಂದಿಗೆ ವಾಗ್ವಾದಕ್ಕಿಳಿದು ಬಸ್ಸನ್ನು ಅರ್ಧದಾರಿಯಲ್ಲಿ ನಿಲ್ಲಿಸಿ ಹೋದ ವಿಚಿತ್ರ ಘಟನೆ ಉಡುಪಿಯಲ್ಲಿ ನಡೆದಿದೆ.
ಉಡುಪಿ ನಗರದಿಂದ ಸಂತೆಕಟ್ಟೆಗೆ ತೆರಳುತ್ತಿದ್ದ ಖಾಸಗಿ ಬಸ್‌ನಲ್ಲಿ ಈ ಘಟನೆ ನಡೆದಿದ್ದು, ಪ್ರಯಾಣಿಕರು ಪರದಾಡಿದ್ದಾರೆ.
ಉಡುಪಿಯಿಂದ ಸಂತೆಕಟ್ಟೆ ಭಾಗಕ್ಕೆ ತೆರಳುತ್ತಿದ್ದ ಖಾಸಗಿ ಬಸ್‌ಗೆ ನಿಟ್ಟೂರು ಬಳಿ ಬಸ್ ಚಾಲಕನ ಪ್ರೇಯಸಿ ಬಸ್ ಹತ್ತಿದ್ದಾಳೆ. ಈ ವೇಳೆ ಚಾಲಕನ ಪ್ರೇಯಸಿ ಹಾಗೂ ಚಾಲಕನ ಮಧ್ಯೆ ಮಾತಿನ ಚಕಮಕಿ ನಡೆದಿದೆ. ನಿರ್ವಾಹಕ ಸಮಾಧಾನಪಡಿಸಲು ಯತ್ನಿಸಿದರೂ ಸಾಧ್ಯವಾಗಲಿಲ್ಲ.
ವಾಗ್ವಾದದ ಮಧ್ಯೆಯೂ ಚಾಲಕ ಬಸ್ಸನ್ನು ಚಲಾಯಿಸುತ್ತಲೇ ಇದ್ದನು. ಕೊನೆಯಲ್ಲಿ ಪ್ರೇಯಸಿಯ ಕಿರಿಕಿರಿಯಿಂದ ರೋಸಿ ಹೋದ ಚಾಲಕ ಬಸ್ಸನ್ನು ಅಂತಿಮವಾಗಿ ಸಂತೆಕಟ್ಟೆಯ ಆಶೀರ್ವಾದ್ ಥಿಯೇಟರ್ ಬಳಿ ನಿಲ್ಲಿಸಿ, ಬಸ್‌ನಿಂದ ಇಳಿದು ಹೊರಟು ಹೋಗಿದ್ದಾನೆ. ಆತ ಬಸ್ ಇಳಿದುಹೋದ ಬೆನ್ನಲ್ಲೇ ಪ್ರೇಯಸಿಯೂ ಬಸ್ಸಿನಿಂದ ಇಳಿದು ಹೊರಟು ಹೋಗಿದ್ದಾಳೆ. ಆದರೆ ಬಸ್‌ಚಾಲಕ ಹಾಗೂ ಆತನ ಪ್ರೇಯಸಿಯ ನಡುವಿನ ವಾಗ್ವಾದದಿಂದಾಗಿ ಬಸ್‌ನಲ್ಲಿದ್ದ ಪ್ರಯಾಣಿಕರು ಪರದಾಡುವಂತಾಯಿತು. ಕೊನೆಗೆ ಪ್ರಯಾಣಿಕರ ಪರಿಸ್ಥಿತಿ ಕಂಡ ಕಂಡಕ್ಟರ್ ಬಸ್ ಓಡಿಸಿಕೊಂಡು ಸ್ಥಳೀಯ ನಿಲ್ದಾಣಕ್ಕೆ ತಂದು ನಿಲ್ಲಿಸಿದ್ದಾನೆ ಎನ್ನಲಾಗಿದೆ. ಬಸ್ ನಿಲ್ಲಿಸಿ ತೆರಳಿದ ಚಾಲಕಮಹಾಶಯನ ನಿರ್ಲಕ್ಷ್ಯತನಕ್ಕೆ ಪ್ರಯಾಣಿಕರು ಹಿಡಿಶಾಪ ಹಾಕಿದ್ದಾರೆ.