December 24, 2024

ರಾಜ್ಯದ ಸರ್ಕಾರಿ/ಖಾಸಗಿ ಶಾಲಾ-ಕಾಲೇಜು ಆವರಣದಲ್ಲಿ ಮೊಬೈಲ್‌ ತಕ್ಷಣದಿಂದಲೇ ನಿಷೇಧ, ಆದೇಶದ ಪೂರ್ಣ ವಿವರ ಇಲ್ಲಿದೆ 

0

ಬೆಂಗಳೂರು: ಶಿಕ್ಷಣ ಇಲಾಖೆ ಶಾಲಾ-ಕಾಲೇಜುಗಳ ಅವಧಿಯಲ್ಲಿ ಮೊಬೈಲ್ ಬಳಕೆಯನ್ನು ನಿಷೇಧಿಸುವ ಕುರಿತು ಆದೇಶ ಹೊರಡಿಸಿದೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರ ಟಿಪ್ಪಣಿ 13/9/2007ರ ಟಿಪ್ಪಣಿಯನ್ನು ಉಲ್ಲೇಖಿಸಲಾಗಿದೆ.

 

ಈ ಕುರಿತು ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ ಎಂ. ಎನ್. ಸೋಮಶೇಖರ್, ಸರ್ಕಾರದ ಅಧೀನ ಕಾರ್ಯದರ್ಶಿಗಳು, ಶಿಕ್ಷಣ ಇಲಾಖೆ ಆದೇಶ ಹೊರಡಿಸಿದ್ದಾರೆ. ಮಾನ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರ ದಿನಾಂಕ 13/09/2007ರ ಟಿಪ್ಪಣಿ ಹಾಗೂ ದಿನಾಂಕ 29/09/2007ರಂದು ಮಾನ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು, ಇಲಾಖೆಯ ಅಧಿಕಾರಿಗಳ ಸಭೆ ನಡೆಸಿ, ಮೊಬೈಲ್ ಕಾಲೇಜುಗಳಲ್ಲಿ ದಿನೇ ದಿನೇ ಹೆಚ್ಚುತ್ತಿದ್ದು, ಇದು ಶಾಲಾ ಕಾಲೇಜುಗಳಲ್ಲಿಯ ಶೈಕ್ಷಣಿಕ ವಾತಾವರಣವನ್ನು ಹದಗೆಡಿಸುತ್ತಿದೆ ಎಂದು ಹೇಳಿದ್ದಾರೆ.

 

ಇದರ ದುಷ್ಪರಿಣಾಮ ಮಕ್ಕಳ ಮೇಲೆ ಬೀರುತ್ತಿದೆಯಲ್ಲದೇ, ಇದರಿಂದ ಕಲಿಕೆಯ ಅಮೂಲ್ಯ ಸಮಯವನ್ನು ಮೊಬೈಲ್ ಮಾತುಗಾರಿಕೆಯಲ್ಲಿ ವ್ಯಯವಾಗುತ್ತಿದೆಯೆಂಬ ಅಂಶ ಇಲಾಖೆಯ ಗಮನಕ್ಕೆ ಬಂದಿದೆ.

 

ಅಲ್ಲದೇ ವಿದ್ಯಾರ್ಥಿಗಳು ಕ್ಲಾಸಿನಲ್ಲಿ ಮೊಬೈಲ್ ಬಳಸಿ ಸಂಗೀತ ಕೇಳುವುದು, ಆಟವಾಡುವು ಹಾಗೂ ಎಸ್‌ಎಂಎಸ್ ಕಳುಹಿಸುವುದು ಮಾಡುತ್ತಿದ್ದು, ಇದರಿಂದ ತರಗತಿಗಳಲ್ಲಿ ಅಹಿತಕರ ವಾತಾವರಣ ಉಂಟಾಗಿ ಶೈಕ್ಷಣಿಕ ಚಟುವಟಿಕೆಗಳಿಗೆ ತೊಂದರೆ ಉಂಟಾಗುತ್ತದೆ. ಇದರೊಂದಿಗೆ ಅನೇಕ ಪಾಲಕ-ಪೋಷಕರು ಕೂಡಾ ಈ ಕುರಿತು ಅನೇಕ ಸಂದರ್ಭಗಳಲ್ಲಿ ಆತಂಕ ವ್ಯಕ್ತಪಡಿಸಿರುತ್ತಾರೆಂಬ ಅಂಶ ಸಭೆಯಲ್ಲಿ ಚರ್ಚೆಯಾಗಿ ಮಕ್ಕಳ ಕಲಿಕಾ ಸಮಯದ ರಕ್ಷಣೆಯ ಕ್ರಮವಾಗಿ ಮೊಬೈಲ್ ಉಪಯೋಗವನ್ನು ನಿಷೇಧಿಸಬೇಕೆಂಬ ಒಟ್ಟಾರೆ ಅಭಿಪ್ರಾಯ ಈ ಸಭೆಯಲ್ಲಿ ವ್ಯಕ್ತವಾಗಿರುತ್ತದೆ.

ಆದ್ದರಿಂದ ಈ ಆದೇಶ ಹೊರಡಿಸಲಾಗಿದೆ. ಪ್ರಸ್ತಾವನೆಯಲ್ಲಿ ವಿವರಿಸಲಾದ ಅಂಶಗಳ ಹಿನ್ನೆಲೆಯಲ್ಲಿ, 1ನೇ ತರಗತಿಯಿಂದ 12ನೇ ತರಗತಿಯವರೆಗೆ (1 ರಿಂದ 10ನೇ ತರಗತಿ ಹಾಗೂ ಪ್ರಥಮ & ದ್ವಿತೀಯ ಪಿಯುಸಿ) ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಪ್ರತಿಯೊಂದು ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಗೆ ಅನ್ವಯಿಸುವಂತೆ ತಕ್ಷಣದಿಂದ ಜಾರಿಗೆ ಬರುವಂತೆ, ಮೊಬೈಲ್‌ ಅನ್ನು ಶಾಲಾವಧಿಯಲ್ಲಿ, ಶಾಲಾ ಕಾಲೇಜುಗಳ ಆವರಣದಲ್ಲಿ ಉಪಯೋಗಿಸುವುದನ್ನು ನಿಷೇಧಿಸಲಾಗಿದೆ.

 

ಇದರೊಂದಿಗೆ ಶಾಲಾ ಕಾಲೇಜುಗಳ ಶಿಕ್ಷಕರು, ಉಪನ್ಯಾಸಕರು ಹಾಗೂ ಯಾವುದೇ ಸಿಬ್ಬಂದಿ ವರ್ಗದವರು ಕೂಡಾ ಶಾಲಾವಧಿಯಲ್ಲಿ, ಶಾಲಾ ಕಾಲೇಜುಗಳ ಆವರಣದಲ್ಲಿ ಮೊಬೈಲ್ ಬಳಸುವುದನ್ನು ನಿಷೇಧಿಸಲಾಗಿದೆ. ನಿಷೇಧವನ್ನು ಉಲ್ಲಂಘಿಸಿ ವಿದ್ಯಾರ್ಥಿಗಳು, ಶಿಕ್ಷಕರು-ಉಪನ್ಯಾಸಕರು ಹಾಗೂ ಸಿಬ್ಬಂದಿಯವರು ಶಾಲಾವಧಿಯಲ್ಲಿ, ಶಾಲಾ ಆವರಣದಲ್ಲಿ ಮೊಬೈಲ್ ಬಳಸಿದಲ್ಲಿ ಅಂತಹ ಮೊಬೈಲ್‌ಗಳನ್ನು ಮುಟ್ಟುಗೋಲು ಹಾಕಿಕೊಳ್ಳತಕ್ಕದ್ದು. ಈ ನಿಷೇಧವನ್ನು ಅನುಷ್ಠಾನಗೊಳಿಸಲು ಅನುಷ್ಠಾನ ಸಮಿತಿಯನ್ನು ರಚಿಸಿ, ಅವುಗಳ ಜವಾಬ್ದಾರಿ/ ಅಧಿಕಾರ ವ್ಯಾಪ್ತಿ ನಿಗದಿಪಡಿಸಿದೆ.

 

ಅನುಷ್ಠಾನ ಸಮಿತಿ: ಈ ಆದೇಶವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಪ್ರತಿಯೊಂದು ಶಾಲಾ ಕಾಲೇಜಿನ ಮಟ್ಟದಲ್ಲಿ ಶಾಲಾ ಕಾಲೇಜುಗಳ ಮುಖ್ಯಸ್ಥರ ಅಧ್ಯಕ್ಷತೆಯಲ್ಲಿ ಒಂದು ಮುಟ್ಟುಗೋಲು ಸಮಿತಿಯನ್ನು ರಚಿಸುವುದು. ಈ ಸಮಿತಿಯ ರಚನೆ ಕೆಳಗಿನಂತಿರುತ್ತದೆ. ಶಾಲೆ/ ಕಾಲೇಜಿನ ಮುಖ್ಯಸ್ಥರು ಅಧ್ಯಕ್ಷರಾಗಿರುತ್ತಾರೆ. ಶಾಲೆ/ ಕಾಲೇಜಿನ ಒಬ್ಬ ಹಿರಿಯ ಶಿಕ್ಷಕರು/ ಉಪನ್ಯಾಸಕರು ಸದಸ್ಯರು. ದೈಹಿಕ ಶಿಕ್ಷಕರು ಸದಸ್ಯರು.

 

ಈ ಸಮಿತಿಯ ಸದಸ್ಯರೆಲ್ಲರು ಶಾಲಾ/ ಕಾಲೇಜುಗಳ ಆವರಣದೊಳಗೆ, ಶಾಲಾ ಅವಧಿಯಲ್ಲಿ ಯಾರೂ ಮೊಬೈಲ್ ತರದಂತೆ ತಡೆಗಟ್ಟುವುದು.

* ಈ ಬಗ್ಗೆ ಎಲ್ಲಾ ವಿದ್ಯಾರ್ಥಿಗಳಿಗೆ ಹಾಗೂ ಸಿಬ್ಬಂದಿಯವರಿಗೆ ಸೂಚನೆ ಮೂಲಕ
ತಿಳುವಳಿಕೆ ನೀಡುವುದು.

* ಸೂಚನಾ ಫಲಕದ ಮೇಲೆ ಈ ವಿಷಯ ಪ್ರಮುಖವಾಗಿ ಪ್ರಕಟಿಸುವುದು.

* ಮಕ್ಕಳ ಪಾಲಕ/ ಪೋಷಕರ ಗಮನ ಸೆಳೆಯುವುದು.

* ನಿಷೇಧವಿದ್ದರು ಬಳಕೆಯಾಗುವ ಸನ್ನಿವೇಶಗಳಲ್ಲಿ ಮುಟ್ಟುಗೋಲು ಹಾಕುವುದು.

* ಈ ಕುರಿತು ಸಂದರ್ಭಗನುಗುಣವಾಗಿ ತಕ್ಷಣದ ಅಧಿಕಾರಿಗಳಿಗೆ ವರದಿ ಮಾಡುವುದು.

* ಅವಶ್ಯವೆಂದಲ್ಲಿ ಭಾರತ ಸಂಚಾರ ನಿಗಮ, (B.S.N.L) ಇವರಿಗೆ ಪತ್ರ ಬರೆದು ದೂರವಾಣಿ ಬೂಥ್ (Coin Box) ಸ್ಥಾಪಿಸಲು ಕೋರುವುದು.

ರಾಜ್ಯದ ಪ್ರತಿಯೊಂದು ಜಿಲ್ಲೆಯ ಉಪನಿರ್ದೇಶಕರು (ಆಡಳಿತ) ಹಾಗೂ ಉಪನಿರ್ದೇಶಕರು (ಪದವಿ ಪೂರ್ವ ಶಿಕ್ಷಣ)ರವರುಗಳಲ್ಲಿ ತಮ್ಮ ಅಧೀನದ ಅಧಿಕಾರಿಗಳೊಂದಿಗೆ ತಮ್ಮ ಅಧೀನ ಶಾಲಾ/ ಕಾಲೇಜುಗಳಿಗೆ ಭೇಟಿ ನೀಡಿದಾಗ ಮೊಬೈಲ್ ಬಳಕೆ/ ಉಪಯೋಗದ ಬಗ್ಗೆ ಹೊರಡಿಸಿದ ನಿಷೇಧದ ಆದೇಶವನ್ನು ಅನುಷ್ಠಾನಗೊಳಿಸುವ ಹಾಗೂ ಕಾಲ ಕಾಲಕ್ಕೆ ವರದಿ ಮಾಡುವ ಅಧಿಕಾರ ಹೊಂದಿರುತ್ತಾರೆ ಎಂದು ಆದೇಶ ಹೇಳಿದೆ.

Leave a Reply

Your email address will not be published. Required fields are marked *

ಇತ್ತೀಚಿನ ಸಂಪೂರ್ಣ ಸುದ್ದಿಗಳು