ಪತಿ ಅಬಕಾರಿ ಇಲಾಖೆ ಉಪ ಆಯುಕ್ತ, ಪತ್ನಿ ಪೊಲೀಸ್ ವರಿಷ್ಠಾಧಿಕಾರಿ.. ಅದು ಒಂದೇ ಜಿಲ್ಲೆಯಲ್ಲಿ!
ಚಾಮರಾಜನಗರ, ಜುಲೈ, 03: ಚಾಮರಾಜನಗರ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ಡಾ.ಬಿ.ಟಿ.ಕವಿತಾ ಅಧಿಕಾರ ಅವರು ಇಂದು (ಜುಲೈ 03) ಸ್ವೀಕರಿಸಿದ್ದು, ವಿಶೇಷ ಎಂದರೆ ಇವರ ಪತಿ ಚಾಮರಾಜನಗರ ಅಬಕಾರಿ ಇಲಾಖೆ ಉಪ ಆಯುಕ್ತರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಚಾಮರಾಜನಗರದಲ್ಲಿ ಎಸ್ಪಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಪದ್ಮಿನಿ ಸಾಹು ಅವರನ್ನು ಬೆಂಗಳೂರಿಗೆ ವರ್ಗಾವಣೆ ಮಾಡಲಾಗಿದ್ದು, ಕವಿತಾ ಅವರು ನಾಗರಿಕ ಹಕ್ಕು ನಿರ್ದೇಶನಾಲಯದ ಎಸ್ಪಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಕವಿತಾ ಅವರು 2016ರ ಕರ್ನಾಟಕ ಕೇಡರ್‌ನ ಅಧಿಕಾರಿ ಆಗಿದ್ದಾರೆ. ಬುಧವಾರ (ಜುಲೈ 03) ಮಧ್ಯಾಹ್ನ ಚಾಮರಾಜನಗರ ಎಎಸ್ಪಿ ಉದೇಶ್ ಅವರಿಂದ ಚಾಮರಾಜನಗರ ಎಸ್ಪಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಪತಿ ನಾಗಶಯನ ಅಬಕಾರಿ ಇಲಾಖೆ ಉಪ ಆಯುಕ್ತರಾಗಿದ್ದರೆ, ಪತ್ನಿ ಈಗ ಚಾಮರಾಜನಗರ ಪೊಲೀಸ್ ವರಿಷ್ಠಾಧಿಕಾರಿ ಆಗಿ ಬಂದಿರುವುದೇ ವಿಶೇಷವಾಗಿದೆ.