December 24, 2024

ಮುಸ್ಲಿಂ ಬಾಂಧವರು ಬಕ್ರೀದ್ ಹಬ್ಬದ ಊಟಕ್ಕೆ ಕರೆಯಲಿಲ್ಲವೇ?, ಪರವಾಗಿಲ್ಲ ಇದನ್ನು ಓದಿ..!!

0

ಬೆಂಗಳೂರು, ಜೂನ್. 18: ಬಕ್ರೀದ್‌ ಹಬ್ಬಕ್ಕೆ ಮುಸ್ಲಿಂ ಬಾಂಧವರು ಊಟಕ್ಕೆ ಕರೆಯಲಿಲ್ಲವೆಂದು ಪ್ರೀತಿಯಿಂದ ಆರೋಪಿಸೋದು ಒಂದ್ಕಡೆಯಾದ್ರೆ, ಮುಸ್ಲಿಂ ಬಾಂಧವರ ಮನೆಗಳಲ್ಲಿ ಬಕ್ರೀದ್ ಹಬ್ಬಕ್ಕೆ ಹೋಗಿ ಊಟ ಮಾಡಿದ್ದರ ಚಿತ್ರ ಹಾಕೊಂಡು ಖುಷಿ ಪಡೋದು ಮತ್ತೊಂದ್ಕಡೆ.

 

ಆದ್ರೆ… ಇಷ್ಟು ವರ್ಷ ಯುಗಾದಿ, ದೀಪಾವಳಿ, ನಾಗರಪಂಚಮಿ, ಊರಮ್ಮನ ಜಾತ್ರೆ ಮೊದಲಾದ ಇಂತಹ ಸಾಲು ಸಾಲು ಹಿಂದುಗಳ ಹಬ್ಬಗಳಲ್ಲಿ ನಮ್ಮನ್ಯಾಕೆ ಕರೀಲಿಲ್ಲ ಎನ್ನುವ ಪ್ರೀತಿಯ ಆರೋಪವನ್ನೂ ಮುಸ್ಲಿಂ‌ ಬಾಂಧವರು‌ ಮಾಡಿದ್ದನ್ನು ನಾನು ನೋಡಲಿಲ್ಲ. ಅಂತೆಯೇ ನಾನು ಈ ಹಬ್ಬಗಳಲ್ಲಿ ಇ‌ಂತಿಂತವರ ಮನೆಯಲ್ಲಿ ಹಬ್ಬದೂಟ ಮಾಡಿದೆ ಎಂದು ಫೋಟೋ ಹಾಕಿಕೊಂಡಿದ್ದನ್ನೂ ನಾ ಕಾಣೆ… ಇದ್ದರೂ ಬೆರಳೆಣಿಕೆಯ ಉದಾಹರಣೆ ಇರಬಹುದು.

 

ಯಾಕೆ ಹೀಗೆ ಅಂತ?
ಮುಸ್ಲೀಮರ ಮನೆಗಳಲ್ಲಿ ಊಟ ಮಾಡುವುದನ್ನು ವಿಶೇಷವೆನ್ನಿಸುವಂತೆ ಬಿಂಬಿಸುವ ನಾವುಗಳು‌ ನಮ್ಮ ಮನೆಗಳಲ್ಲಿ ಮುಸ್ಲೀಮರ ಊಟವನ್ನು ಸಹಜವೆಂದು ಭಾವಿಸುತ್ತೇವೆಯೆ? ಅಥವಾ ಭಾವಿಸುತ್ತಿಲ್ಲ ಯಾಕೆ? ಅಥವಾ ನಮ್ಮ ಹಬ್ಬಗಳಿಗೆ ಮುಸ್ಲೀಮರನ್ನು ಆಹ್ವಾನಿಸಿದರೆ ಅದನ್ನೂ ಸೌಹಾರ್ಧತೆಯ ಭಾಗವಾಗಿ ಸಾರ್ವಜನಿಕವಾಗಿ ಹಂಚಿಕೊಳ್ಳುವುದು ಕಡಿಮೆ.

 

ಹೀಗೆ ಮಾಡುವ ಮೂಲಕ ಅನುಕಂಪ ತೋರುವುದು, ವಿಶೇಷವೆಂಬಂತೆ ತೋರಿಸುತ್ತಲೇ ಮುಸ್ಲಿಂ ಬಾಂಧವರನ್ನು ಎಂಥದೋ ‘ಅವರು’ ಎಂಬ ಪ್ರತ್ಯೇಕತೆಯ ಸಾಂಕೇತಿಕತೆಯನ್ನು ಬಲಗೊಳಿಸುತ್ತೇವೆಯಾ? ಎನ್ನುವ ಅನುಮಾನ. ಇದು ಹೊಸ ತಲೆಮಾರಿನ ಮಕ್ಕಳಲ್ಲಿ ಹೀಗೆಯೇ ಪರಿಣಾಮ ಬೀರಿದಂತೆ ಕಾಣುತ್ತದೆ.

 

ಉತ್ತರ ಕರ್ನಾಟಕ-ಕಲ್ಯಾಣ ಕರ್ನಾಟಕದ ಹಳ್ಳಿಗಳಲ್ಲಿ ಹಿಂದು-ಮುಸ್ಲೀಮರು ಮದುವೆ ಮುಂಜಿಗಳಲ್ಲಿ ಬೆರೆಯುವುದು, ಮೊಹರಂ ಹಬ್ಬದಲ್ಲಿ ತಾತ್ಕಾಲಿಕವಾಗಿ ಧರ್ಮದ ಗಡಿಗೆರೆ ಅಳಿಸಿ ಒಂದಾಗುವುದು, ಅಳಿಯ ಮಾವ, ಅಣ್ಣ ತಮ್ಮ, ದೊಡ್ಡಮ್ಮ ಚಿಕ್ಕಮ್ಮ ಮೊದಲಾದ ಸಂಬಂಧ ವಾಚಕಗಳಲ್ಲಿ ಆತ್ಮೀಯತೆ ತೋರುವುದು ಸಹಜವೆಂಬಂತೆ ಕಾಣುತ್ತವೆ.

 

ಇಂತಹ ಸಹಜ ಹೊಂದಾಣಿಕೆ ಕೊಡುಕೊಳೆ ಇಂದು ಮುಖ್ಯ ಅನ್ನಿಸುತ್ತೆ, ಪ್ರತ್ಯೇಕವೆಂಬಂತೆ ತೋರುವ ಯಾವ ಚಟುವಟಿಕೆಗಳೂ ಧರ್ಮದ ಗಡಿಗೆರೆಗಳನ್ನು ತಾತ್ಕಾಲಿಕವಾಗಿಯೂ ಅಳಿಸಿದಂತೆ ಕಾಣುವುದಿಲ್ಲ. ಅಂಬೇಡ್ಕರ್ ಜಾತಿ ವಿನಾಶಕ್ಕಾಗಿ ಹೇಳುವ ಸಹಭೋಜನದ ಪರಿಣಾಮ ತೀರಾ ಕಡಿಮೆಯೇನಲ್ಲ.

 

ದಲಿತರೆ ಮಾಡುವ ಗ್ರಾಮದೇವತೆಯ ಬೇಟೆ ಹಬ್ಬಗಳಲ್ಲಿ ಊರಿನ ಅನೇಕ ಮೇಲ್ಜಾತಿಗಳು ಉಂಡು ಬರುತ್ತಾರೆ. ಈ ಊಟವನ್ನು ಸಾರ್ವಜನಿಕಗೊಳಿಸುವುದಿಲ್ಲ. ಅಪರೂಪಕ್ಕೆ ದಲಿತ ಮೇಲ್ಮದ್ಯಮ ವರ್ಗದ ಯುವಕ ಯುವತಿಯರು ಮೇಲ್ಮಧ್ಯಮ ಜಾತಿಗಳ ಮನೆಗಳಲ್ಲೂ ಊಟ ಮಾಡಬಹುದು. ಅದನ್ನೂ ಸಾರ್ವಜನಿಕಗೊಳಿಸುವುದು ಕಡಿಮೆ. ಅಂದರೆ ಜಾತಿಗಳ ಬೆರೆಯುವಿಕೆ ಸಾರ್ವಜನಿಕ ಸುದ್ದಿಯಾಗದು. ಧರ್ಮಗಳ ಬೆರೆಯುವಿಕೆ ಸಾರ್ವಜನಿಕ ಸುದ್ದಿಯಾಗುವುದರ ಹಿಂದೆ ಇರುವ ಇರುವ ಆಶಯವೇನು?

 

ದಲಿತ ಮೇಲ್ಜಾತಿಗಳ ಬೆರೆಯುವಿಕೆಯ ಗೌಪ್ಯತೆ ಕಾಪಾಡುವುದರ ಹಿಂದೆ ಜಾತೀಯತೆಯನ್ನು ಹಾಗೇ ಉಳಿಸುವ ಮನಸ್ಥಿತಿ ಕೆಲಸ ಮಾಡುತ್ತದೆ. ಇನ್ನಾದರೂ ಸಾಮಾಜಿಕ‌‌ ಜಾಲತಾಣಗಳಲ್ಲಿ ಮೇಲುಜಾತಿಗಳು ದಲಿತರ‌ ಮನೆಗಳಲ್ಲಿ ಊಟ ಮಾಡಿದ್ದನ್ನು, ತಮ್ಮ ಮನೆಗಳಲ್ಲಿ ದಲಿತರು ಊಟ ಮಾಡಿದ್ದರ ಚಿತ್ರಗಳನ್ನು ಹೀಗೆ ಸಾರ್ವಜನಿಕವಾಗಿ ಹಂಚಿಕೊಳ್ಳುವ ಅಭಿಯಾನವೂ ಶುರುವಾಗಲಿ.

 

ಭಾರತದ ಸಂವಿಧಾನದ ಪ್ರಸ್ತಾವನೆ ‘ಭಾರತದ ಜನೆತೆಯಾದ ನಾವು’ ಎಂದು ಶುರುವಾಗುತ್ತದೆ. ಈ ಜನತೆಯಾದ ‘ನಾವು’ ಗಳಲ್ಲಿ ಮುಸ್ಲೀಮರೂ ಇದ್ದಾರೆ. ಸೂಕ್ಷ್ಮವಾಗಿ ಗಮನಿಸಿ ಪ್ರಜ್ಞಾವಂತರೂ ಮುಸ್ಲೀಮರನ್ನು ‘ಅವರು’ ಎಂದು ಸಂಭೋದಿಸಲು ಶುರು ಮಾಡಿದ್ದಾರೆ. ಒಂದು ಊರಿನ ಮೇಲ್ಜಾತಿಗಳೂ ದಲಿತರನ್ನೂ ‘ಅವರು’ ಎಂದೇ ಗುರುತಿಸಿತ್ತಿದ್ದರು. ಗಂಡಸರೆಲ್ಲಾ ಒಟ್ಟಾದಾಗ ಗಂಡುಕುಲದ ಬಗ್ಗೆ ಮಾತನಾಡುವಾಗ ಮಹಿಳೆಯರನ್ನೂ ಹೀಗೆ ‘ಅವರು’ ಎಂದೇ ಗುರುತಿಸುತ್ತಾರೆ.

 

ಈ ‘ಅವರು’ ‘ನಾವು’ ಎನ್ನುವ ಬೌಂಡರಿಯನ್ನು ಸಂವಿಧಾನ ಹೊಡೆದು ಹಾಕಿಯೇ ‘ಜನತೆಯಾದ ನಾವುಗಳು’ ಎಂದಿದೆ. ಹಾಗಾಗಿ ನಮ್ಮಲ್ಲಿಯ ಕೆಲವರು ಅವರಾಗುವುದು ಬೇಡ. ‘ನಾವು’ ನಾವಾಗಿರಲು ಪ್ರಯತ್ನಿಸೋಣ.

 

ಬರಹ: ಅರುಣ್ ಜೋಳದಕೂಡ್ಲಿಗಿ, ಬಳ್ಳಾರಿ

(ಜಾನಪದ ಎಂ.ಎ ಮತ್ತು ಕನ್ನಡ ಸಾಹಿತ್ಯದಲ್ಲಿ ಎಂ.ಎ ಸ್ನಾತಕೋತ್ತರ ಪದವಿ, ಪಿಎಚ್.ಡಿ ಪದವಿಗಳನ್ನು ಕನ್ನಡ ವಿಶ್ವವಿದ್ಯಾಲಯದಲ್ಲಿ ಪಡೆದಿದ್ದಾರೆ. ಸದ್ಯ ಪ್ರೊ.ರಹಮತ್ ತರೀಕೆರೆ ಅವರ ಮಾರ್ಗದರ್ಶನದಲ್ಲಿ ಜನಪದ ಕವಿಗಳ ಕುರಿತು ಪೋಸ್ಟ್ ಡಾಕ್ಟರಲ್ ಉನ್ನತ ಸಂಶೋಧನೆಯಲ್ಲಿ ತೊಡಗಿದ್ದಾರೆ)

Leave a Reply

Your email address will not be published. Required fields are marked *

ಇತ್ತೀಚಿನ ಸಂಪೂರ್ಣ ಸುದ್ದಿಗಳು