ದರ್ಶನ್ & ಗ್ಯಾಂಗ್ನಿಂದ, ನಿರ್ಮಾಪಕ ಉಮಾಪತಿ ಮೇಲೂ ಹಲ್ಲೆಗೆ ನಡೆದಿತ್ತು ಯತ್ನ!
ಒಂದು ಕಾಲದಲ್ಲಿ ಗೆಳೆಯರಾಗಿದ್ದ ದರ್ಶನ್ ಮತ್ತು ಉಮಾಪತಿ ಶ್ರೀನಿವಾಸ್ ಈಗ ಪರಸ್ಪರ ವಿರೋಧಿಗಳು, ಉಮಾಪತಿಯನ್ನು ‘ತಗಡು’ ಎಂದಿದ್ದ ದರ್ಶನ್ ಇಂದು ಸಲಾಕೆಗಳ ಹಿಂದಿದ್ದಾರೆ. ಇದೀಗ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದ ಉಮಾಪತಿ ಶ್ರೀನಿವಾಸ್, ತಮ್ಮ ಮೇಲೂ ಹಲ್ಲೆಗೆ ಯತ್ನ ಮಾಡಿದ್ದ ದರ್ಶನ್ ಮತ್ತು ಗ್ಯಾಂಗ್ನ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ದರ್ಶನ್ ಜೈಲಿಗೆ ಹೋದಾಗಿನಿಂದ ಬಹುತೇಕ ಮೌನವಾಗಿಯೇ ಇದ್ದ ಉಮಾಪತಿ ಶ್ರೀನಿವಾಸ್, ಇಂದು (ಜೂನ್ 18) ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ರೇಣುಕಾ ಸ್ವಾಮಿ ಕೊಲೆ ಪ್ರಕರಣವನ್ನು ತೀವ್ರವಾಗಿ ಖಂಡಿಸಿರುವ ಉಮಾಪತಿ ಶ್ರೀನಿವಾಸ್, ತಮ್ಮ ಮೇಲೆಯೂ ಒಮ್ಮೆ ಹಲ್ಲೆ ನಡೆಸುವ ಯತ್ನ ದರ್ಶನ್ ಹಾಗೂ ಗ್ಯಾಂಗ್ನಿಂದ ಆಗಿತ್ತು ಎಂಬ ಆತಂಕಕಾರಿ ವಿಷಯವನ್ನ ಸಹ ಉಮಾಪತಿ ಬಿಚ್ಚಿಟ್ಟಿದ್ದಾರೆ.
ಉಮಾಪತಿ ಅವರು ದರ್ಶನ್ ಹೆಸರು ಬಳಸಿ 25 ಕೋಟಿ ರೂಪಾಯಿ ಬ್ಯಾಂಕ್ ಲೋನ್ಗೆ ಅರ್ಜಿ ಹಾಕಿ ವಂಚನೆಗೆ ಯತ್ನಿಸಿದ್ದಾರೆ ಎಂದು ದರ್ಶನ್ ಹಾಗೂ ಗ್ಯಾಂಗ್ ಆರೋಪ ಮಾಡಿತ್ತು. ಮೈಸೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಆರೋಪ ಮಾಡಲಾಗಿತ್ತು. ವಿಶೇಷವೆಂದರೆ ಅಂದು ಉಮಾಪತಿ ಶ್ರೀನಿವಾಸ್ ಸಹ ಮೈಸೂರಿನಲ್ಲಿದ್ದರು. ಆ ದಿನ ದರ್ಶನ್ ಗೆಳೆಯರು ಕೆಲವರು ಉಮಾಪತಿಗೆ ಕರೆ ಮಾಡಿ ಬೆದರಿಕೆ ಹಾಕಿದ್ದರು ಎಂಬ ಅಂಶ ಹೊರಬಂದಿತ್ತು. ಇಂದು ಮಾಧ್ಯಮಗಳೊಟ್ಟಿಗೆ ಮಾತನಾಡಿರುವ ಉಮಾಪತಿ, ‘ಮೈಸೂರಿನ ಹೋಟೆಲ್ ಒಂದರಲ್ಲಿ ತಮ್ಮ ಮೇಲೂ ಸಹ ಹಲ್ಲೆಗೆ ದರ್ಶನ್ ಮತ್ತು ಗ್ಯಾಂಗ್ ಸ್ಕೆಚ್ ಹಾಕಿತ್ತು’ ಎಂದಿದ್ದಾರೆ.
ಹೋಟೆಲ್ ಒಂದಕ್ಕೆ ಟೂಲ್ಸ್ (ಆಯುಧ)ಗಳನ್ನು ತಂದು ಇರಿಸಿಕೊಳ್ಳಲಾಗಿತ್ತು. ನನ್ನನ್ನು ಹೊಡೆಯುವ ಯೋಜನೆ ಆ ದಿನ ಹಾಕಿದ್ದರು, ಅಂದು ನಾನು ಬದುಕಿ ಬಂದಿದ್ದೇ ಹೆಚ್ಚು’ ಎಂದಿರುವ ಉಮಾಪತಿ ಶ್ರೀನಿವಾಸ್, ಮೈಸೂರಿನ ಸೋಷಿಯಲ್ಸ್ಗೆ ನನ್ನನ್ನು ಕರೆಸಿಕೊಂದು ಇವರು ಆಡದ ಮಾತುಗಳಿಲ್ಲ, ನನ್ನೆದುರಿಗೆ ಟೇಬಲ್ ಮೇಲೆ ಆಯುಧಗಳನ್ನು ಇಟ್ಟಿದ್ದರು. ಅಂದು ನಾನು ಬದುಕಿ ಬಂದಿದ್ದೇ ಹೆಚ್ಚು’ ಎಂದು ಹಳೆಯದನ್ನು ನೆನಪು ಮಾಡಿಕೊಂಡಿದ್ದಾರೆ. ‘ರಾಬರ್ಟ್’ ಸಿನಿಮಾದ ಚಿತ್ರೀಕರಣದ ವೇಳೆಯೂ ಸಹ ಕೆಲವು ಬಾರಿ ಕೆಲವೊರೊಟ್ಟಿಗೆ ದರ್ಶನ್ ಒರಟಾಗಿ ನಡೆದುಕೊಂಡಿದ್ದುಂಟು ಎಂದು ಹೇಳಿದ್ದಾರೆ.
ಆ ಸಮಯದಲ್ಲಿ ಅವರು ತಪ್ಪು ಮಾಡಿದಾಗ ನಾನು ನೇರವಾಗಿ ಹೇಳುತ್ತಿದ್ದೆ, ಹೀಗೆಲ್ಲ ಮಾಡುವುದರಿಂದ ಯಾರಿಗೂ ಲಾಭವಿಲ್ಲ, ತಾಳ್ಮೆಯಿಂದಿರಿ ಎಂದು ಬುದ್ಧಿವಾದ ಹೇಳುತ್ತಿದ್ದೆ. ಒಮ್ಮೊಮ್ಮೆ ನಿರ್ಮಾಪಕನಾಗಿ ನಾನು ಯಾರ ಮೇಲಾದರೂ ಸಿಟ್ಟಿನಿಂದ ವರ್ತಿಸಿದಾಗ ದರ್ಶನ್ ಸಹ ನನಗೆ ಬುದ್ಧಿ ಹೇಳುತ್ತಿದ್ದರು. ಆದರೆ ಇಂದು ಅವರಿಂದ ಕ್ಷಮಿಸಲಾಗದ ತಪ್ಪಾಗಿದೆ. ವ್ಯಕ್ತಿ ತಾಳ್ಮೆಯಿಂದ ಇದ್ದರೆ ಏನೇನೋ ಸಾಧಿಸಬಹುದು ಅವರ ಸಿಟ್ಟು, ಅಹಂ, ಅಂಹಕಾರವೇ ಇಂದಿನ ಅವರ ಸ್ಥಿತಿಗೆ ಕಾರಣ ಎಂದಿದ್ದಾರೆ ಉಮಾಪತಿ.