35 ದಿನಗಳ ಅಜ್ಞಾತವಾಸಕ್ಕೆ ತೆರೆ: ಮಧ್ಯರಾತ್ರಿ ಪ್ರಜ್ವಲ್ ರೇವಣ್ಣ ಎಸ್‌ಐಟಿ ವಶಕ್ಕೆ
ಬೆಂಗಳೂರು : ಬರೋಬ್ಬರಿ 35 ದಿನಗಳ ಕಾಲ ಜರ್ಮನಿಯಲ್ಲಿ ತಲೆಮರೆಸಿಕೊಂಡಿದ್ದ ಹಾಸನ ಜೆಡಿಎಸ್ ಸಂಸದ, ಅಶ್ಲೀಯ ವಿಡಿಯೋ ಪ್ರಕರಣ ಆರೋಪಿ ಪ್ರಜ್ವಲ್ ರೇವಣ್ಣ ಅಂತಿಮವಾಗಿ ಬೆಂಗಳೂರಿಗೆ ವಾಪಸಾಗಿದ್ದು, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅವರನ್ನು ಎಸ್‌ಐಟಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಜ್ವಲ್ ರೇವಣ್ಣನನ್ನು ವಶಕ್ಕೆ ಪಡೆದ ಎಸ್ಐಟಿ, ಕೆಐಎಬಿ ಹಿಂದಿನ ಗೇಟ್ ಮೂಲಕ ಕರೆದೊಯ್ದಿದ್ದಾರೆ. ಏರ್ಪೋರ್ಟ್ನಿಂದ ಬೆಂಗಳೂರಿನ ಎಸ್ಐಟಿ ಕಚೇರಿಯತ್ತ ಬಿಗಿ ಭದ್ರತೆಯಲ್ಲಿ ಕರೆದುಕೊಂಡು ಹೋಗಿದ್ದಾರೆ.
ಲುಫ್ತಾನ್ಸ್ ಏರ್ ಲೈನ್ಸ್ ವಿಮಾನದಲ್ಲಿ ಜರ್ಮನಿಯ ಮೂನಿಕ್ ನಗರದಿಂದ ಬೆಂಗಳೂರಿಗೆ ಆಗಮಿಸಿದ ಪ್ರಜ್ವಲ್ ರೇವಣ್ಣರನ್ನು ಬಂಧಿಸಲು ಎಸ್‌ಐಟಿ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿತ್ತು.
ಪ್ರಜ್ವಲ್ ರೇವಣ್ಣ ಆಗಮನ ಹಿನ್ನಲೆಯಲ್ಲಿ ಟರ್ಮಿನಲ್ -2 ಗೇಟ್ ಬಳಿ ಹೆಚ್ಚಿನ ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿತ್ತು. ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿವೆ. ನಿರೀಕ್ಷಣಾ ಜಾಮೀನು ಅರ್ಜಿಯನ್ನು ಕೂಡ ಸ್ಥಳೀಯ ನ್ಯಾಯಾಲಯ ತಿರಸ್ಕರಿಸಿತ್ತು.
ಬಿಗಿ ಬಂದೋಬಸ್ತ್
ಅಹಿತಕರ ಘಟನೆ ನಡೆಯದಂತೆ ಎಲ್ಲಾ ರೀತಿಯ ಮುನ್ನೆಚ್ಚರಿಕೆ ವಹಿಸಲಾಗಿದೆ. ಸಿಐಡಿ ಕಚೇರಿ ಬಳಿ ಕೂಡ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಸಿಐಡಿ ಕಚೇರಿ ಮುಂದೆ ಬ್ಯಾರಿಕೇಡ್ ಹಾಕಲಾಗಿದ್ದು, 50 ಹೆಚ್ಚು ಪೊಲೀಸರು ಕಾವಲಿದ್ದಾರೆ.
ಇಮಿಗ್ರೇಷನ್ ಅಧಿಕಾರಿಗಳ ವಶಕ್ಕೆ
ಪ್ರಜ್ವಲ್ ರೇವಣ್ಣ ಜರ್ಮನಿಗೆ ತೆರಳಿದ್ದ ನಂತರ ಅವರ ಬಂಧನಕ್ಕೆ ಲುಕ್‌ಔಟ್ ನೋಟಿಸ್ ಹೊರಡಿಸಲಾಗಿದ್ದರಿಂದ ಇಮಿಗ್ರೇಷನ್ ಅಧಿಕಾರಿಗಳು ಮೊದಲು ಅವರನ್ನು ವಶಕ್ಕೆ ಪಡೆದರು. ಬಳಿಕ ಎಸ್‌ಐಟಿ ಅಧಿಕಾರಿಗಳಿಗೆ ಹಸ್ತಾಂತರ ಮಾಡಿದರು.
ಇಂದು ಬೆಳಗ್ಗೆ ಪ್ರಜ್ವಲ್ ರೇವಣ್ಣ ಆರೋಗ್ಯ ತಪಾಸಣೆ ನಡೆಸಲಿದ್ದು ಬಳಿಕ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಿದೆ. ಹೆಚ್ಚಿನ ವಿಚಾರಣೆಗಾಗಿ ಎಸ್‌ಐಟಿ ಪ್ರಜ್ವಲ್ ರೇವಣ್ಣರನ್ನು ವಶಕ್ಕೆ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡುವ ಸಾಧ್ಯತೆ ಇದೆ.
ಏಪ್ರಿಲ್ 26ರಂದು ಲೋಕಸಭಾ ಚುನಾವಣೆ ಮತದಾನದ ಬಳಿಕ ಪ್ರಜ್ವಲ್ ರೇವಣ್ಣ ಜರ್ಮನಿಗೆ ತೆರಳಿದ್ದರು. ಅದಾದ ಬಳಿಕ ಕಣ್ಮರೆಯಾಗಿದ್ದ ಅವರು, ಬಳಿಕ ಸಾಮಾಜಿಕ ಮಾಧ್ಯಮದಲ್ಲಿ ತಾವು ಮೇ 30ರಂದು ಬೆಂಗಳೂರಿಗೆ ಬರುತ್ತಿರುವುದಾಗಿ ಮಾಹಿತಿ ನೀಡಿದ್ದರು.