ಭಾರತದತ್ತ ಪ್ರಜ್ವಲ್ ರೇವಣ್ಣ; ಬಂಧನಕ್ಕೆ ಅಧಿಕಾರಿಗಳ ಸಿದ್ಧತೆ
ಬೆಂಗಳೂರು : ಪೆನ್‌ಡ್ರೈವ್ ಪ್ರಕರಣದ ಪ್ರಮುಖ ಆರೋಪಿ ಪ್ರಜ್ವಲ್ ರೇವಣ್ಣ 34 ದಿನಗಳ ಕಣ್ಣಾಮುಚ್ಚಾಲೆ ಆಟಕ್ಕೆ ಕೊನೆಗೂ ಬ್ರೇಕ್ ಬೀಳುವ ಸಮಯ ಹತ್ತಿರವಾಗಿದೆ. ಅತ್ಯಾಚಾರ ಆರೋಪಗಳನ್ನು ಎದುರಿಸುತ್ತಿರುವ ಪ್ರಜ್ವಲ್ ರೇವಣ್ಣ ಜರ್ಮನಿಯಿಂದ ಭಾರತಕ್ಕೆ ಬರುತ್ತಿದ್ದು, ಬಂಧನಕ್ಕೆ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
ಮುನಿಚ್‌ನಿಂದ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಇಂದು ಮಧ್ಯರಾತ್ರಿ ಪ್ರಜ್ವಲ್ ರೇವಣ್ಣ ಆಗಮಿಸಲಿದ್ದು, ಎಸ್‌ಐಟಿ ಅಧಿಕಾರಿಗಳು ವಿಮಾನ ನಿಲ್ದಾಣದಲ್ಲಿ ಠಿಕಾಣಿ ಹೂಡಿದ್ದು, ಪ್ರಜ್ವಲ್ ರೇವಣ್ಣ ಆಗಮನಕ್ಕೆ ಕಾಯುತ್ತಿದ್ದಾರೆ. ಜನಪ್ರತಿನಿಧಿಗಳ ಕೋರ್ಟ್ ಈಗಾಗಲೇ ಅರೆಸ್ಟ್ ವಾರೆಂಟ್ ಜಾರಿ ಮಾಡಿದ್ದು, ವಿಮಾನ ನಿಲ್ದಾಣದಲ್ಲೇ ಅವರನ್ನು ಎಸ್‌ಐಟಿ ವಶಕ್ಕೆ ಪಡೆಯಲಿದೆ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರುತ್ತಿದ್ದಂತೆ ಇಮಿಗ್ರೇಷನ್ ಅಧಿಕಾರಿಗಳು ರಾಜತಾಂತ್ರಿಕ ಪಾಸ್‌ಪೋರ್ಟ್ ಸೇರಿದಂತೆ ದಾಖಲೆಗಳನ್ನು ಪರಿಶೀಲನೆ ಮಾಡಲಿದ್ದು, ಬಳಿಕ ಪ್ರಜ್ವಲ್ ರೇವಣ್ಣ ಅವರನ್ನು ವಶಕ್ಕೆ ಪಡೆಯಲಿದ್ದಾರೆ. ಆ ನಂತರ ಎಸ್ಐಟಿ ವಶಕ್ಕೆ ಒಪ್ಪಿಸಲಾಗುತ್ತದೆ.
ಪ್ರಜ್ವಲ್ ರೇವಣ್ಣ ಬಂಧನಕ್ಕೆ ಲುಕ್‌ಔಟ್, ಬ್ಲೂಕಾರ್ನರ್ ನೋಟಿಸ್ ಹೊರಡಿಸಲಾಗಿದೆ. ಬಂಧನದ ಬಳಿಕ ರೇವಣ್ಣ ಕುಟುಂಬಸ್ಥರಿಗೆ ಎಸ್‌ಐಟಿ ಮಾಹಿತಿ ನೀಡಲಿದೆ. ಬಳಿಕ ಅವರನ್ನು ವಿಮಾನ ನಿಲ್ದಾಣದಿಂದ ಎಸ್‌ಐಟಿ ಕಚೇರಿಗೆ ಕರೆತರಲಾಗುತ್ತದೆ.