ಬಡ ರೈತರಿಗೆ ಹೊರೆ; ಬಿತ್ತನೆ ಬೀಜ ದರ ಏರಿಕೆ: ಸರ್ಕಾರಕ್ಕೆ ರಣ ಬಿಸಿ ತಟ್ಟಲಿದೆ ಎಂದ ವಿಜಯೇಂದ್ರ
ಬೆಂಗಳೂರು, ಮೇ 29: ರಾಜ್ಯದಲ್ಲಿ ಮುಂಗಾರು ಚುರುಕುಗೊಂಡಿದ್ದು, ಬಿತ್ತನೆ ಬೀಜ ದರ ಏರಿಕೆಯಿಂದ ರಾಜ್ಯದ ರೈತರಿಗೆ ಹೊರೆಯಾಗಿದೆ. ಬಿತ್ತನೆ ಬೀಜ ದರ ಹೆಚ್ಚಳ ಹಿನ್ನೆಲೆ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಿಕಾರಿಪುರ ಶಾಸಕ ಬಿ ವೈ ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ವಿಜಯೇಂದ್ರ ಅವರು, ಬರದಿಂದ ನೊಂದು ಇದೀಗ ಮುಂಗಾರು ಬಿತ್ತನೆಗೆ ಸಜ್ಜಾಗುತ್ತಿರುವ ರೈತರಿಗೆ ಬಿತ್ತನೆ ಬೀಜಗಳ ದರ ಏರಿಕೆ ಮೂಲಕ ದಿನಕ್ಕೊಂದು ಬೆಲೆ ಏರಿಕೆಯ ಬರೆ ಎಳೆಯಲು ಮುಂದಾಗಿದೆ ಕಾಂಗ್ರೆಸ್ ಸರ್ಕಾರ ಎಂದು ಕಿಡಿಕಾರಿದ್ದಾರೆ.
ವಾರಂಟಿ ಇಲ್ಲದ ಗ್ಯಾರಂಟಿ ನೀಡುವಲ್ಲಿಯೂ ವಿಫಲವಾಗಿ ಖಜಾನೆ ಬರಿದು ಮಾಡಿಕೊಂಡಿರುವ ಪರಿಣಾಮ ದಿನಕ್ಕೊಂದು ದರ ಏರಿಕೆ ಮಾಡಿ ಜನ ಸಾಮಾನ್ಯರು ದೈನಂದಿನ ಜೀವನ ಸಾಗಿಸಲು ಉಸಿರುಗಟ್ಟುವ ಪರಿಸ್ಥಿತಿ ನಿರ್ಮಿಸುತ್ತಿದೆ, ಅನ್ನದಾತರಿಗೂ ಇದೇ ಪರಿಸ್ಥಿತಿ ನಿರ್ಮಿಸಿರುವ ಕಾಂಗ್ರೆಸ್ ಸರ್ಕಾರಕ್ಕೆ ಶೀಘ್ರವೇ ಜನಾಕ್ರೋಶದ ರಣ ಬಿಸಿ ತಟ್ಟಲಿದೆ ಎಂದು ಹೇಳಿದ್ದಾರೆ.