ಶಾಸಕರಾದರೆ ಪೊಲೀಸರ ಮೇಲೆ ಬೆದರಿಕೆ ಹಾಕಬಹುದೇ?: ಸಿಎಂ ಸಿದ್ದರಾಮಯ್ಯ ಪ್ರಶ್ನೆ
ಮೈಸೂರು: ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಪೊಲೀಸರಿಗೆ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಐಪಿಸಿ 353ರ ಪ್ರಕಾರ ಎಫ್ ಐ ಆರ್ ನ್ನು ದಾಖಲಿಸಲಾಗಿದ್ದು, ಕಾನೂನು ಎಲ್ಲರಿಗೂ ಒಂದೇ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಈ ಕುರಿತು ಮೈಸೂರಿನಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಬಿಜೆಪಿ ಶಾಸಕ ಹರೀಶ್ ಪೂಂಜಾ ಅವರ ಬಂಧನಕ್ಕೆ ಕಾಂಗ್ರೆಸ್ ಒತ್ತಡ ಹೇರುತ್ತಿದೆ ಎಂಬ ಪ್ರತಿಪಕ್ಷಗಳ ಆರೋಪಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿ, ಕಾನೂನು ಎಲ್ಲರಿಗೂ ಒಂದೇ. ಐಪಿಸಿ 353ರ ಪ್ರಕಾರ ಎಫ್ ಐ ಆರ್ ನ್ನು ದಾಖಲಿಸಲಾಗಿದ್ದು, ಅದು ಜಾಮೀನು ರಹಿತ ಅಪರಾಧವಾಗಿರುತ್ತದೆ. ಈ ಕಾನೂನಿನಂತೆ 7 ವರ್ಷ ಜೈಲುವಾಸದ ಶಿಕ್ಷೆ ನೀಡುವ ಅವಕಾಶವಿದೆ. ಆದರೆ ಹರೀಶ್ ಪೂಂಜಾ ಶಾಸಕರೆಂದ ಮಾತ್ರಕ್ಕೆ ಅವರ ಮೇಲಿನ ಆರೋಪವನ್ನು ಅಲ್ಲಗೆಳೆಯಲು ಸಾಧ್ಯವೇ ಎಂದರು.
ಹರೀಶ್ ಪೂಂಜಾ ಅವರಿಗೆ ಸ್ಟೇಷನ್ ಬೇಲ್ ದೊರಕಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಪೊಲೀಸರ ಮೇಲೆ ಬೆದರಿಕೆ ಹಾಕಿರುವ 2 ಪ್ರಕರಣಗಳು ಅವರ ಮೇಲೆ ದಾಖಲಾಗಿದೆ. ಶಾಸಕರಾದರೆ ಪೊಲೀಸರ ಮೇಲೆ ಬೆದರಿಕೆ ಹಾಕಬಹುದೇ ಎಂದು ಮುಖ್ಯಮಂತ್ರಿಗಳು ಮರುಪ್ರಶ್ನಿಸಿದರು.
“ಪ್ರಜ್ವಲ್ ರೇವಣ್ಣನನ್ನು ವಿದೇಶಕ್ಕೆ ಕಳುಹಿಸಿರುವುದೇ ದೇವೇಗೌಡರು”
ಸಂಸದ ಪ್ರಜ್ವಲ್ ರೇವಣ್ಣನನ್ನು ವಿದೇಶಕ್ಕೆ ಕಳಿಸಿರುವುದೇ ಅವರ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ, ವಿದೇಶಕ್ಕೆ ಕಳುಹಿಸಿ ಈಗ ಪತ್ರ ಬರೆದು ಏನು ಮಾಡುತ್ತಾರೆ? ನನ್ನ ಪ್ರಕಾರ ಹಾಸನದ ಸಂಸದ ಪ್ರಜ್ವಲ್ ರೇವಣ್ಣನನ್ನು ವಿದೇಶಕ್ಕೆ ಕಳುಹಿಸಿರುವುದೇ ದೇವೇಗೌಡರು, ಸಾರ್ವಜನಿಕವಾಗಿ ಅನುಕಂಪಗಳಿಸಲು ಪತ್ರ ಬರೆದಿದ್ದಾರೆ. ವಿದೇಶಕ್ಕೆ ಕಳುಹಿಸಿರುವುದು ಅವರೇ ಎಂದು ಸಿದ್ದರಾಮಯ್ಯ ಅವರು ವಾಗ್ದಾಳಿ ನಡೆಸಿದರು.
ಕುಮಾರಸ್ವಾಮಿ ಅವರ ಅಣ್ಣನ ಮಗ ಅತ್ಯಾಚಾರ, ಲೈಂಗಿಕ ದೌರ್ಜನ್ಯವನ್ನೆಲ್ಲಾ ಮಾಡಿದ್ದಾನೆ. ಯಾರು ಅತ್ಯಾಚಾರ ಮಾಡಿದ್ದಾರೆಯೋ ಅದು ದೊಡ್ಡ ಅಪರಾಧ. ಈ ಗಂಭೀರ ವಿಚಾರದಿಂದ ಗಮನವನ್ನು ಬೇರೆಡೆ ಸೆಳೆಯಲು ಕುಮಾರಸ್ವಾಮಿ ಏನೇನೋ ಹೇಳುತ್ತಿದ್ದಾರೆ. ಶಿವಕುಮಾರ್ ಮತ್ತಿತರ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದರು.