ಪೊಲೀಸ್ ಠಾಣೆಗೆ ಬಂದು ಧಮ್ಕಿ ಹಾಕುವರ ಬಗ್ಗೆ ಮೃಧುದೋರಣೆ ತೋರಿಸಲು ಆಗುತ್ತಾ?: ಗೃಹ ಸಚಿವ ಡಾ. ಜಿ. ಪರಮೇಶ್ವರ್
ಬೆಂಗಳೂರು, ಮೇ 25: ನಮ್ಮವರೇ ಬೆಂಗಳೂರನ್ನು ಅವಹೇಳನ ಮಾಡುತ್ತಿದ್ದಾರೆ. ಹೊರ ದೇಶದವರಿಗೆ, ಹೊರ ಜನರಿಗೆ ಬೆಂಗಳೂರಿನ ಬಗ್ಗೆ ಏನನ್ನು ಬಿಂಬಿಸಲು ಹೊರಟಿದ್ದೀರಿ ಎಂದು ಬಿಜೆಪಿಯವರನ್ನು ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು ಪ್ರಶ್ನಿಸಿದರು.
ಸದಾಶಿವನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ಅವರು ಬ್ರ್ಯಾಂಡ್ ಬೆಂಗಳೂರು ಮಾಡುವುದಾಗಿ ಅನೇಕಸಲ ಹೇಳಿದ್ದಾರೆ. ಇದಕ್ಕೆ ನಿಗದಿತವಾದ ಕಾರ್ಯಕ್ರಮವನ್ನು ಹಾಕಿಕೊಂಡಿದ್ದಾರೆ. ಎಲ್ಲರ ಆಡಳಿತಾವಧಿಯಲ್ಲಿಯೂ ಮಳೆಗಾಲದಲ್ಲಿ ರಸ್ತೆ ಗುಂಡಿ ಬೀಳುವುದು, ಚರಂಡಿಯಲ್ಲಿ ಕಸ ತುಂಬಿಕೊಂಡು ಫ್ಲಡ್ ಆಗಿದೆ. ಇದನ್ನು ಆಧರಿಸಿ ಬೆಂಗಳೂರಿನ ಬಗ್ಗೆ ಕೆಟ್ಟದಾಗಿ ಬಿಂಬಿಸುವುದು ಸರಿಯಲ್ಲ ಎಂದರು.
“ಡಿಜೆ ಹಳ್ಳಿ, ಕೆಜಿ ಹಳ್ಳಿ ಮಾದರಿ ಮಾಡುತ್ತೀವಿ ಅಂದಿರುವುದು ಗಮನಕ್ಕೆ ಬಂದಿದೆ”
ಪತ್ರಕರ್ತರ ಪ್ರಶ್ನೆಗೆ ಉತ್ತರಿಸುತ್ತಾ, ಪೊಲೀಸ್ ಠಾಣೆಗೆ ಬಂದು ಧಮ್ಕಿ ಹಾಕುವರ ಬಗ್ಗೆ ಮೃಧುದೋರಣೆ ತೋರಿಸಲು ಆಗುತ್ತಾ? ಅಂತವರ ಮೇಲೆ ಕಾನೂನಿನಲ್ಲಿ ಇರುವ ಅವಕಾಶದಂತೆ ಕ್ರಮ ಜರುಗಿಸಲಾಗುತ್ತದೆ. ಡಿಜೆ ಹಳ್ಳಿ, ಕೆಜಿ ಹಳ್ಳಿ ಮಾದರಿ ಮಾಡುತ್ತೀವಿ ಅಂದಿರುವುದು ಗಮನಕ್ಕೆ ಬಂದಿದೆ. ಮುಲಾಜಿಲ್ಲದೇ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.
ಶಾಸಕ ಹರೀಶ್ ಪೂಂಜಾನನ್ನು ಬಂಧಿಸಿ ಠಾಣೆ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಪೊಲೀಸರು ದೋಷರೋಪಣಾ ಪಟ್ಟಿ ಸಲ್ಲಿಸುತ್ತಾರೆ. ಪ್ರಕರಣ ಜನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಮುಂದೆ ಬರುತ್ತದೆ ಎಂದರು.