“ನನಗೆ ಸಿಗುವ ಹುಡುಗ ಯಾವ ಹೀರೋಗಿಂತ ಕಡಿಮೆ ಇರಬಾರದು!”- ದೇವರಿಗೆ ಪತ್ರ ಬರೆದ ಹುಡುಗಿ!
ಬೆಂಗಳೂರು ಮೇ 24: ಬೆಂಗಳೂರಿನ ಬನಶಂಕರಿ ದೇವಸ್ಥಾನದ ಹುಂಡಿಯಲ್ಲಿ ಸಿಕ್ಕ ಪತ್ರವೊಂದು ನೋಡುಗರನ್ನು ಬೆಚ್ಚಿ ಬೀಳಿಸಿದೆ. ಹುಂಡಿಯಲ್ಲಿ ಹಾಕಿದ ಪತ್ರದಲ್ಲಿ ತಾನು ಮದುವೆಯಾಗುವ ಹುಡುಗ ಹೇಗಿರಬೇಕು ಎಂದು ಹುಡುಗಿಯೊಬ್ಬಳು ವಿವರಿಸಿದ್ದಾಳೆ. ತಾನಂದುಕೊಂಡಂತಹ ಹುಡುಗನ್ನನ್ನೇ ತನಗೆ ಸಿಗಲೆಂದು ಆಶೀರ್ವಾದ ಮಾಡು ದೇವರೆ ಎಂದು ಹುಡುಗಿ ಪತ್ರ ಬರೆದು ಹುಂಡಿಯಲ್ಲಿ ಹಾಕಿದ್ದಾಳೆ.
ಪತ್ರದಲ್ಲಿ ಹುಡುಗಿ ತಾನು ಮದುವೆಯಾಗುವ ಹುಡುಗ ಹೇಗಿರಬೇಕು ಎಂದಷ್ಟೇ ವಿವರಿಸಿಲ್ಲ. ಅದರೊಂದಿಗೆ ತಾನು ಪ್ರೀತಿಸುತ್ತಿದ್ದ ಹುಡುಗನ ಬಗ್ಗೆ ಕೂಡ ವಿವರಿಸಿದ್ದಾಳೆ. ಹಾಗಾದರೆ ಹುಡುಗಿ ಬನಶಂಕರಿ ಹುಂಡಿಯಲ್ಲಿ ಹಾಕಿದ ಪತ್ರದಲ್ಲಿ ಏನಿದೆ ಅನ್ನೋದನ್ನು ನೀವು ಕೂಡ ಓದಿ ಬಿಡಿ.
”ಇವರಿಗೆ
ಶ್ರೀ ಬನಶಂಕರಿ ಅಮ್ಮ ಬೆಂಗಳೂರು,
ಅಮ್ಮ ನಾನು ತಪ್ಪು ಮಾಡಿದಿನಿ. ಹಿಂದೆ ಪತ್ರ ಬರೆದಾಗ ನಾನು ಗೋಪಿನಾಥ ಅಂಬು ಬಿಟ್ಟರೆ ಬೇರೆ ಯಾರನ್ನೂ ಮದುವೆ ಆಗಬಾರದು ಅಂತ ಬರೆದಿದ್ದೆ. ಆದರೆ ಈಗ ಅವನು ನನಗೆ ಬೇಡ. ಆದಷ್ಟು ಬೇಗ ಮುಂದಿನ ವರ್ಷ 2024ರಲ್ಲಿ ನನ್ನ ಮದುವೆ ಒಳ್ಳೆಯ ಹೆಸರು, ಕೀರ್ತಿ ಹೊಂದಿರುವ ಗುಣವಂತ, ಸಿರಿವಂತ, ಹೃದಯವಂತ, ಐಶ್ವರ್ಯವಂತ, ಬುದ್ಧಿವಂತ, ಯಾವ ಹೀರೋಗಿಂತ ಕಡಿಮೆ ಇರದ, ಚೆನ್ನಾಗಿರುವ, ಐಎಎಸ್ ಅಧಿಕಾರಿ ಜೊತೆ ನನ್ನ ಮದುವೆ ಮಾಡಿಸು.
ನನ್ನ ಗಂಡ ಬೇರೆ ಯಾವ ಹೆಂಗಸರನ್ನು ಕೆಟ್ಟ ದೃಷ್ಟಿಯಲ್ಲಿ ನೋಡಬಾರದು. ನನ್ನ ಗಂಡ ನನ್ನ ತುಂಬಾ ಚೆನ್ನಾಗಿ ಪ್ರೀತಿಯಿಂದ ನೋಡಿಕೊಳ್ಳಬೇಕು. ನಾನಂದ್ರ ಅವರ ಜೀವ ಆಗಿರಬೇಕು. ನಾವಿಬ್ಬರೂ ನೂರು ಕಾಲ ಮಕ್ಕಳು ಮೊಮ್ಮಕ್ಕಳ ಜೊತೆ ಜೀವನ ಮಾಡಬೇಕು. ನಮ್ಮಿಬ್ಬರಿಗೆ ಆರೋಗ್ಯ ಆಯುಷ್ಯ ಕೊಟ್ಟು ಕಾಪಾಡು. ಇಷ್ಟು ವರ್ಷ ಕಾದಿದ್ದಕ್ಕೆ ಒಳ್ಳೆ ಹುಡುಗ ಸಿಕ್ಕ ಅಂತ ಖುಷಿ ಆಗ್ಬೇಕು. ನನ್ನನ್ನು ಆಡಿಕೊಳ್ಳವರ ಬಾಯಿ ಮುಚ್ಚಿಸಬೇಕು” ಅಂತ ಹುಡುಗಿ ಪತ್ರದಲ್ಲಿ ಬರೆದಿದ್ದಾಳೆ.
ಪತ್ರ ದೇವರ ಹುಂಡಿ ಹಣ ಏನಿಸುವ ವೇಳೆ ಸಿಕ್ಕಿದೆ. ದೇವರ ಹುಂಡಿ ಏಣಿಕೆ ಕಾರ್ಯ ಇಂದು (ಮೇ 24) ನಡೆಯಿತು. ಇದನ್ನು ಓದಿದ ಹುಂಡಿ ಹಣ ಏನಿಕೆದಾರರು ಶಾಕ್ ಆಗಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ಪತ್ರ ಸಿಕ್ಕಾಪಟ್ಟೆ ವೈರಲ್ ಆಗಿದ್ದು ಸಾಕಷ್ಟು ಕಮೆಂಟ್‌ಗಳು ಬರುತ್ತಿವೆ.