“ರೆಮಲ್” ಚಂಡಮಾರುತ! ಕರಾವಳಿಗೂ ಇಂದು, ನಾಳೆ ಪ್ರಭಾವ ಬೀರುವ ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ
ಈಗಾಗಲೇ ದೇಶದ ಬಹುತೇಕ ರಾಜ್ಯಗಳಲ್ಲಿ ಬಿಸಿಗಾಳಿಯ ಪ್ರಮಾಣ ಹೆಚ್ಚಾಗುತ್ತಲಿದ್ದು, ಇನ್ನು ಕೆಲವು ರಾಜ್ಯಗಳಲ್ಲಿ ಮಳೆ ಮುಂದುವರೆದಿದೆ. ಅದರಲ್ಲೂ ಇದೀಗ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಿನ್ನೆಲೆ, ಹೊಸ ಚಂಡಮಾರುತವೊಂದು ಪ್ರಭಾವ ಬೀರುವುದಂತೂ ಖಚಿತ ಎನ್ನುವ ಮುನ್ಸೂಚನೆ ಇದೆ. ಹಾಗಾದರೆ ಈ ಹೊಸ ಚಂಡಮಾರುತದ ಹೆಸರೇನು ಹಾಗೂ ಯಾವೆಲ್ಲ ಭಾಗಗಳಿಗೆ ಹೆಚ್ಚು ಪ್ರಭಾವ ಬೀರಲಿದೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಬಂಗಾಳ ಕೊಲ್ಲಿಯಲ್ಲಿ ಈ ವರ್ಷದ ಮುಂಗಾರು ಪೂರ್ವ ಅವಧಿಯ ಮೊದಲ ಚಂಡಮಾರುತ ರೂಪುಗೊಳ್ಳುತ್ತಿದ್ದು, ಇದೇ ಭಾನುವಾರ ಪಶ್ಚಿಮ ಬಂಗಾಳ ಹಾಗೂ ಪಕ್ಕದ ಬಾಂಗ್ಲಾದೇಶದ ಕರಾವಳಿಗೆ ಅಪ್ಪಳಿಸುವ ಸಾಧ್ಯತೆ ಹೆಚ್ಚಿದೆ ಎನ್ನುವ ಎಚ್ಚರಿಕೆ ಸಂದೇಶವನ್ನು ಹವಾಮಾನ ಇಲಾಖೆ ರವಾನಿಸಿದೆ. ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಸೃಷ್ಟಿಯಾಗಿರುವ ಈ ಚಂಡಮಾರುತಕ್ಕೆ “ರೆಮಲ್” ಎಂದು ಹೆಸರಿಡಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಇಂದು (ಮೇ 24) ರೆಮಲ್ ಚಂಡಮಾರುತ ಸ್ಪಷ್ಟ ರೂಪ ಪಡೆಯಲಿದ್ದು, ಬಳಿಕ ಇದು ಶನಿವಾರ (ಮೇ 25) ತೀವ್ರ ಸ್ವರೂಪ ಪಡೆದು, ಬಾಂಗ್ಲಾದೇಶ ಹಾಗೂ ಪಶ್ಚಿಮ ಬಂಗಾಳದ ಕರಾವಳಿವರೆಗೂ ವ್ಯಾಪಿಸಲಿದೆ. ಇನ್ನು ಭಾನುವಾರ (ಮೇ 26)ವಂತೂ ಭಾರಿ ಪ್ರಮಾಣದಲ್ಲಿ ಪ್ರಭಾವ ಬೀರುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ಸಂದೇಶವನ್ನು ರವಾನಿಸಿದೆ.