PM Vishwakarma Yojana: Rs 3 ಲಕ್ಷ ಸಹಾಯಧನಕ್ಕಾಗಿ ಈಗಲೇ ಅರ್ಜಿ ಹಾಕಿ: ಯೋಜನೆಯ ಪ್ರಯೋಜನಗಳ ಪಟ್ಟಿ ಇಲ್ಲಿದೆ
ಬೆಂಗಳೂರು, ಮೇ 18: ಕೇಂದ್ರ ಸರ್ಕಾರವು ದೇಶದ ಗ್ರಾಮೀಣ ಮತ್ತು ನಗರ ಪ್ರದೇಶದ ಸಾಂಪ್ರದಾಯಿಕ ಕುಶಲಕರ್ಮಿಗಳು ಮತ್ತು ಕರಕುಲಗಾರರನ್ನು ಸದೃಢಗೊಳಿಸಲು ‘ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ’ ಜಾರಿಗೆ ತಂದಿದೆ. ಯೋಜನೆಯ ಲಾಭ ಪಡೆಯಲು ವಿಶ್ವಕರ್ಮ ಕುಲಕರ್ಮಿಗಳಿಂದ ಅರ್ಜಿಗಳು ಆಹ್ವಾನಿಸಲಾಗಿದೆ.
ಕರ್ನಾಟಕದಲ್ಲಿರುವ ವಿಶ್ವಕರ್ಮ ಸಮುದಾಯದ ಸಾಂಪ್ರದಾಯಿಕ ಕುಶಲಕರ್ಮಿಗಳಿಂದ ಯೋಜನೆ ಲಾಭ ಪಡೆಯಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅಗತ್ಯ ದಾಖಲಾತಿಗಳ ಸಮೇತ ಅರ್ಜಿ ಸಲ್ಲಿಸಬೇಕು. ಹಾಗಾದರೆ ಯಾವೆಲ್ಲ ದಾಖಲೆಗಳು, ಬೇಕು, ಯೋಜನೆಯ ಪ್ರಯೋಜನಗಳು, ಯಾರು ಅರ್ಜಿ ಸಲ್ಲಿಸಬಹುದು ಎಂಬ ಮಾಹಿತಿ ಇಲ್ಲಿದೆ.
ಅರ್ಹ ಕರಕುಶಲಕರ್ಮಿಗಳು ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್, ಆಧಾರ್ ಗೆ ಲಿಂಕ್ ಇರುವ ಮೊಬೈಲ್ ನಂಬರ್, ರೇಷನ್ ಕಾರ್ಡ್ ದಾಖಲೆ ಜತೆ ಅರ್ಜಿ ಸಲ್ಲಿಸಬೇಕು. ಒಂದು ವೇಳೆ ರೇಷನ್ ಕಾರ್ಡ್ ಇಲ್ಲದಿದ್ದರೆ ಕುಟುಂಬ ಸದಸ್ಯರ ಆಧಾರ್ ಕಾರ್ಡ್ ಒಯ್ಯಬೇಕು.
ನಿಮ್ಮ ಹತ್ತಿರದ ಬೆಂಗಳೂರು ಒನ್ ಗ್ರಾಮ ಒನ್, ಡಿಜಿಟಲ್ ಸೇವಾ ಕೇಂದ್ರಗಳಿಗೆ ಭೇಟಿ ಕೊಟ್ಟು ಈಗಲೇ ಅರ್ಜಿಸಲ್ಲಿಸಿ ಮೂರು ಲಕ್ಷ ರೂ.ವರೆಗೆ ಸಹಾಯಧನ ಪಡೆಯಬಹುದು. ಇದರೊಂದಿಗೆ ಇತರ ಪ್ರಯೋಜನಗಳ ಪಟ್ಟಿ, ಯಾರೆಲ್ಲ ಅರ್ಹರು ಎಂದು ತಿಳಿಯಿರಿ.
ಪಿಎಂ ವಿಶ್ವಕರ್ಮ ಯೋಜನೆಯ ಪ್ರಯೋಜನ
* ವಿಶ್ವಕರ್ಮ ಸಹೋದರ ಮತ್ತು ಸಹೋದರಿಯರಿಗೆ ರೂ. 3 ಲಕ್ಷದವರೆಗೆ ಆಧಾರರಹಿತ ಸಾಲ ವಿತರಣೆ.
* ರೂ. 15 ಸಾವಿರವರೆಗಿನ ಟೂಲ್ ಕಿಟ್. ಕೌಶಲ್ಯಾಭಿವೃದ್ಧಿಗೆ 5 ದಿನಗಳ ತರಬೇತಿ ಮತ್ತು ದೈನಂದಿನ ರೂ. 500 ಸಂಭಾವನೆ.
* ಸಂಪೂರ್ಣ ತಯಾರಾದ ಉತ್ಪನ್ನಗಳಿಗೆ ಕ್ವಾಲಿಟಿ ಸರ್ಟಿಫಿಕೇಶನ್, ಬ್ರಾಂಡಿಂಗ್ ಮತ್ತು ಜಾಹೀರಾತು ಮಾದರಿಯಲ್ಲಿ ಮಾರ್ಕೆಟಿಂಗ್ ನೆರವು.
* ಬಡ್ಡಿ ದರ 5%ನಂತೆ ಮೊದಲ ಬಾರಿಗೆ ರೂ 1ಲಕ್ಷ ಸಾಲ, 18 ತಿಂಗಳೊಳಗೆ ರೂ 1ಲಕ್ಷ ಹಿಂತಿರುಗಿದರೆ ಇನ್ನೂ 2 ಲಕ್ಷ ಸಾಲ ವಿತರಣೆ ಸೌಲಭ್ಯ.
18 ರೀತಿಯ ಕುಶಲಕರ್ಮಿಗಳಿಗೆ ಲಾಭ
ಮರ ಕೆಲಸಗಾರರು, ಗಾರೆ ಕೆಲಸಗಾರರು, ವಿಗ್ರಹ ತಯಾರಕರು, ಅಕ್ಕಸಾಲಿಗರು, ಕ್ಷೌರಿಕರು, ಅಗಸರು ಕಲ್ಲು ಒಡೆಯುವವರು, ಟೈಲರ್‌ಳು, ಬುಟ್ಟಿ/ಚಾಪೆ/ಕಸಪೊರಕೆ ತಯಾರಕರು, ಹೂವಿನ ಹಾರ ತಯಾರಕರು, ಮೀನು ಬಲೆ ತಯಾರಕರು, ದೋಣಿ ತಯಾರಕರು, ಕಮ್ಮಾರರು, ಕುಂಬಾರರು, ಚರ್ಮಕಾರರು, ಆಯುಧ ತಯಾರಕರು, ಕಬ್ಬಿಣದ ಉಪಕರಣಗಾರರು, ಆಟಿಕೆ ತಯಾರಕರು ಈ ಯೋಜನೆಯ ಲಾಭ ಪಡೆಯಬಹುದು.