ಶಿಕ್ಷಕರ ಒತ್ತಾಯಕ್ಕೆ ಮಣಿದ ಸರ್ಕಾರ, ಎಸ್‌ಎಸ್‌ಎಲ್‌ಸಿ ಪರೀಕ್ಷೆ -2 ದಿನಾಂಕ ಮುಂದೂಡಿಕೆ
ಬೆಂಗಳೂರು, ಮೇ. 18: ಸರ್ಕಾರಿ ನೌಕರರ ಒತ್ತಾಯಕ್ಕೆ ಮಣಿದಿರುವ ಸರ್ಕಾರ 2024ರ ಎಸ್.ಎಸ್.ಎಲ್.ಸಿ ಪರೀಕ್ಷೆ 1 ರಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ನಡೆಸುವ ವಿಶೇಷ ಪರಿಹಾರ ಬೋಧನಾ ತರಗತಿಗಳನ್ನು ಮುಂದೂಡಿದೆ. ಇದರ ಜೊತೆಗೆ ಜೂನ್ 07 ರಿಂದ ನಡೆಯಬೇಕಿದ್ದ ಎಸ್. ಎಸ್.ಎಲ್.ಸಿ ಪರೀಕ್ಷೆ-2 (Karnataka SSLC 2024 Exam 2) ಅನ್ನು ಮುಂದೂಡಿದೆ.
ಇದೇ ತಿಂಗಳ ಮೇ.15 ರಿಂದ ಆರಂಭವಾಗಿದ್ದ ಎಸ್ಎಸ್ಎಲ್ಸಿ ವಿಶೇಷ ಪರಿಹಾರ ಬೋಧನಾ ತರಗತಿಗಳನ್ನು ಮುಂದೂಡಿಕೆ ಮಾಡಿದೆ. ಮೇ 29 ರಿಂದ ಜೂನ್ 13ರ ವರೆಗೆ ನಡೆಸಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ಹಿಂದೆ ಶಿಕ್ಷಣ ಇಲಾಖೆ ನೀಡಿದ್ದ ಆದೇಶಕ್ಕೆ ಸರ್ಕಾರಿ ನೌಕರರಿಂದ ಭಾರಿ ವಿರೋಧ ವ್ಯಕ್ತವಾಗಿತ್ತು. ಈ ಬಗ್ಗೆ ಶಿಕ್ಷಣ ಇಲಾಖೆ ಮತ್ತು ಸರ್ಕಾರಕ್ಕೆ ಪತ್ರ ಬರೆದು ಮನವಿ ಮಾಡಿದ್ದರು.
ಎಸ್ಎಸ್ಎಲ್‌ಸಿ ಪರೀಕ್ಷೆ-2 ಜೂನ್ 14ರಿಂದ ಆರಂಭವಾಗಲಿದ್ದು, ಪರಿಷ್ಕೃತ ವೇಳಾಪಟ್ಟಿಯನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಶೀಘ್ರದಲ್ಲೇ ಬಿಡುಗಡೆ ಮಾಡಲಿದೆ. ಇದೇ ತಿಂಗಳ ಮೇ.9 ರಂದು 2023-24ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟವಾಗಿತ್ತು.