ಸೀತಾರಾಮ ಧಾರವಾಹಿ ನಟಿ ವೈಷ್ಣವಿ ಗೌಡಗೆ ದಂಡ ವಿಧಿಸಿದ ಬೆಂಗಳೂರು ಪೊಲೀಸರು
ಸಂಚಾರ ನಿಯಮ ಎಲ್ಲರಿಗೂ ಒಂದೇ ಆಗಿರಬೇಕು. ಅದರಲ್ಲೂ ನಟ-ನಟಿಯರು, ರಾಜಕಾರಣಿಗಳು ಮೊದಲು ಸಂಚಾರ ನಿಯಮವನ್ನು ಪಾಲಿಸಿ ಎಲ್ಲರಿಗೂ ಆದರ್ಶವಾಗಿರಬೇಕು. ನಿಜ ಜೀವನದಲ್ಲಿ ಮಾತ್ರವಲ್ಲ ತೆರೆ ಮೇಲೆ ಕೂಡ ಸಂಚಾರ ನಿಯಮ ಪಾಲಿಸಿದರೆ ಎಲ್ಲರಿಗೂ ಸ್ಪೂರ್ತಿಯಾಗಬಹುದು. ಸೀತಾ ರಾಮ ನಟಿ ವೈಷ್ಣವಿ ಗೌಡ ಅವರಿಗೆ ಸೀರಿಯಲ್ ಪಾತ್ರದಲ್ಲಿ ನಿಯಮ ಉಲ್ಲಂಘನೆ ಮಾಡಿದ್ದಕ್ಕೆ ನಿಜ ಜೀವನದಲ್ಲಿ ಸಂಕಷ್ಟ ಎದುರಾಗಿದೆ.
ಸದ್ಯ ಕನ್ನಡದ ಜನಪ್ರಿಯ ಧಾರವಾಹಿಗಳಲ್ಲಿ ಒಂದಾಗಿರುವ ಸೀತಾ ರಾಮ ನಟಿ ವೈಷ್ಣವಿ ಗೌಡ ಅವರು ಟ್ರಾಫಿಕ್ ನಿಯಮ ಉಲ್ಲಂಘಿಸಿದ್ದಾರೆ ಎನ್ನುವ ಆರೋಪದ ಅಡಿಯಲ್ಲಿ ದಂಡ ಕಟ್ಟಬೇಕಾಗಿದೆ. ಧಾರವಾಹಿಯಲ್ಲಿ ಸೀತಾ ಪಾತ್ರದಲ್ಲಿ ನಟಿಸಿರುವ ಅವರು, ಸ್ನೇಹಿತೆ ಜೊತೆ ಪ್ರಯಾಣ ಮಾಡುವಾಗ ಹೆಲ್ಮೆಟ್ ಧರಿಸದ ಕಾರಣ ದಂಡ ಕಟ್ಟಬೇಕಿದೆ.
ಧಾರವಾಹಿಯಲ್ಲಿ ಹೆಲ್ಮೆಟ್ ಇಲ್ಲದೆ ನಟಿ ಪ್ರಯಾಣ ಮಾಡುವುದನ್ನು ಗಮನಿಸಿದ ಜಯಪ್ರಕಾಶ್ ಎಕ್ಕೂರು ಎನ್ನುವ ಸಾಮಾಜಿಕ ಹೋರಾಟಗಾರರು, ಮಂಗಳೂರು ನಗರ ಪೊಲೀಸರಿಗೆ ದೂರು ಕೊಟ್ಟಿದ್ದರು. ನಟ-ನಟಿಯರು ಈ ರೀತಿ ಮಾಡುವುದರಿಂದ ಸಮಾಜಕ್ಕೆ ತಪ್ಪು ಸಂದೇಶ ರವಾನೆ ಆಗುತ್ತಿದೆ ಎಂದು ಅವರು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.
ಈ ಕಾರಣಕ್ಕೆ ದೂರು ಕೊಟ್ಟಿದ್ದು, ಧಾರವಾಹಿಯ ನಟಿ, ನಿರ್ದೇಶಕ ಮತ್ತು ಪ್ರಸಾರ ಮಾಡಿದ ಝೀ ವಾಹಿನಿ ಮೇಲೆ ಕ್ರಮ ಜರುಗಿಸಬೇಕು ಎಂದು ದೂರಿನಲ್ಲಿ ಒತ್ತಾಯಿಸಿದ್ದರು. ದೂರು ಸ್ವೀಕರಿಸಿದ ಮಂಗಳೂರು ಪೊಲೀಸರು ಬಳಿಕ ಮಂಗಳೂರು ಪೂರ್ವ ಸಂಚಾರ ಠಾಣೆಗೆ ವರ್ಗಾಯಿಸಿದ್ದರು. ಬಳಿಕ ಜೀ ವಾಹಿನಿ ಮತ್ತು ನಟಿ ವೈಷ್ಣವಿ ಗೌಡ ಅವರಿಗೆ ನೋಟಿಸ್ ನೀಡಲಾಗಿತ್ತು.
ಧಾರವಾಗಿ ಚಿತ್ರೀಕರಣ ಬೆಂಗಳೂರಿನ ನಂದಿನಿ ಲೇಔಟ್‌ನಲ್ಲಿ ನಡೆದಿದ್ದರಿಂದ ರಾಜಾಜಿನಗರ ಪೊಲೀಸ್ ಠಾಣೆಗೆ ಪ್ರಕರಣವನ್ನು ವರ್ಗಾಯಿಸಲಾಗಿತ್ತು. ನಟಿ ವೈಷ್ಣವಿ ಗೌಡ ಅವರಿಗೆ ₹500 ದಂಡ ವಿಧಿಸಿದ್ದು, ದ್ವಿಚಕ್ರ ವಾಹನದ ಮಾಲಕಿ ಸವಿತಾ ಎನ್ನುವವರಿಗೂ ₹500 ದಂಡ ವಿಧಿಸಲಾಗಿದೆ.