ಕಲ್ಲಕ್ಕಡಲ್ : ಎರಡು ದಿನ ಅಬ್ಬರಿಸಲಿದೆ ಸಮುದ್ರ; ರೆಡ್ ಅಲರ್ಟ್ ಘೋಷಣೆ
ಶನಿವಾರ ಮತ್ತು ಭಾನುವಾರದಂದು ಕೇರಳದ ಕರಾವಳಿ ಪ್ರದೇಶಗಳಲ್ಲಿ ಮತ್ತು ದಕ್ಷಿಣ ತಮಿಳುನಾಡು ಕರಾವಳಿಯಲ್ಲಿ ಸಮುದ್ರ ಅಬ್ಬರಿಸಿ ಬೊಬ್ಬಿರಿಯಲಿದೆ. ಹಠಾತ್ ಸಮುದ್ರದ ಭಾರಿ ಅಲೆಗಳನ್ನು ಉಂಟು ಮಾಡುವ ಎಚ್ಚರಿಕೆಯನ್ನು ನೀಡಲಾಗಿದೆ.
ಹಠಾತ್ ಭಾರಿ ಅಲೆಗಳು ಏಳುವುದನ್ನು ‘ಕಲ್ಲಕ್ಕಡಲ್’ ಎಂದು ಕರೆಯಲಾಗುತ್ತದೆ. ಕೇಂದ್ರ ಸಂಸ್ಥೆಗಳು ಶನಿವಾರ ಮತ್ತು ಭಾನುವಾರ ಭಾರಿ ಅಲೆ ಏಳುವ ಸೂಚನೆ ನೀಡಿದ್ದು, ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.
ಭಾರತೀಯ ರಾಷ್ಟ್ರೀಯ ಸಾಗರ ಮಾಹಿತಿ ಸೇವೆಗಳ ಕೇಂದ್ರ (INCOIS) ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದಿಂದ (NDMA) ‘ಕಲ್ಲಕ್ಕಡಲ್’, ಸಮುದ್ರಗಳ ಹಠಾತ್ ಉಬ್ಬರವಿಳಿತದ ವಿದ್ಯಮಾನಕ್ಕೆ ಮೊದಲ ಬಾರಿಗೆ ರೆಡ್ ಅಲರ್ಟ್ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎಚ್ಚರಿಕೆ ನೀಡುವಂತೆ ಸೂಚನೆ
ರಾತ್ರಿ ವೇಳೆ ಬೀಚ್‌ನಲ್ಲಿ ಮಲಗುವವರಿಗೆ ಎಚ್ಚರಿಕೆ ನೀಡುವಂತೆ ಕೆಎಸ್‌ಡಿಎಂಎ ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಿದೆ. ಕಡಲತೀರದ ಬದಿಯ ವ್ಯಾಪಾರಿಗಳು ತಮ್ಮ ಸರಕುಗಳನ್ನು ರಸ್ತೆ ಬದಿಯಲ್ಲಿ ಸಂಗ್ರಹಿಸಲು ಸೂಚಿಸಲಾಗಿದೆ. 0.5 ರಿಂದ 1.5 ಮೀಟರ್ ವರೆಗಿನ ಅನಿಯಮಿತ ಎತ್ತರದ ಅಲೆಗಳು ಕರಾವಳಿ ಪ್ರದೇಶಗಳಿಗೆ ಅಪ್ಪಳಿಸಬಹುದು ಎಂದು ಎಚ್ಚರಿಸಿದೆ. ಮೀನುಗಾರರು ತಮ್ಮ ದೋಣಿಗಳನ್ನು ಸುರಕ್ಷಿತವಾಗಿರಿಸುವಂತೆ ಮತ್ತು ಸಮುದ್ರಕ್ಕೆ ಇಳಿಯುವುದನ್ನು ತಡೆಯುವಂತೆಯೂ ಹೇಳಿದೆ.