ಹಿಂದೂ-ಮುಸ್ಲಿಂ ನಡುವೆ ತಂದಿಟ್ಟು ಒಡೆದು ಹಾಕುವ ಪ್ರಯತ್ನ ಮಾಡುತ್ತಿದ್ದಾರೆ, ಇವರ ಬಳಿ ಇರುವುದು ಒಂದೇ ಅಸ್ತ್ರ: ದುನಿಯಾ ವಿಜಯ್ .
ರಾಜ್ಯದಲ್ಲಿ ಚುನಾವಣೆ ಕಾವು ಮುಂದುವರೆದಿದೆ. 2ನೇ ಹಂತದ ಮತದಾನದ ಬಳಿಕ 3 ಹಂತದ ಮತದಾನಕ್ಕೆ ದಿನಗಣನೆ ಶುರುವಾಗಿದೆ. ಮೇ 7 ರಂದು ಬೆಳಗಾವಿ, ಚಿಕ್ಕೋಡಿ, ಬಾಗಲಕೋಟೆ, ಬಿಜಾಪುರ, ಗುಲ್ಬರ್ಗ, ರಾಯಚೂರು, ಬೀದರ್, ಕೊಪ್ಪಳ, ಹಾವೇರಿ, ಧಾರವಾಡ, ಉತ್ತರ ಕನ್ನಡ, ದಾವಣಗೆರೆ ಮತ್ತು ಶಿವಮೊಗ್ಗದಲ್ಲಿ ಚುನಾವಣೆ ನಡೆಯಲಿದೆ.
ಶಿವಮೊಗ್ಗದಿಂದ ಗೀತಾ ಶಿವರಾಜ್‌ಕುಮಾರ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ಕನ್ನಡ ಸಿನಿಮಾ ತಾರೆಯರು ಗೀತಕ್ಕ ಪರ ಮತಬೇಟೆ ನಡೆಸುತ್ತಿದ್ದಾರೆ. ನಟ ಶಿವರಾಜ್‌ಕುಮಾರ್ ಪತ್ನಿ ಪರ ಹಲವು ದಿನಗಳಿಂದ ಪ್ರಚಾರ ನಡೆಸುತ್ತಾ ಬರುತ್ತಿದ್ದಾರೆ. ಇದೀಗ ನಟರಾದ ದುನಿಯಾ ವಿಜಯ್, ಚಿಕ್ಕಣ್ಣ, ಆಂಕರ್ ಅನುಶ್ರೀ ಮತಯಾಚನೆ ನಡೆಸುತ್ತಿದ್ದಾರೆ.
ಇತ್ತೀಚೆಗೆ ಗೆಳೆಯರ ಜೊತೆ ನಂಜನಗೂಡಿಗೆ ಪಾದಯಾತ್ರೆಯಲ್ಲಿ ಹೋಗಿ ಬಂದ ನಟ ದುನಿಯಾ ವಿಜಯ್ ಇದೀಗ ಶಿವಮೊಗ್ಗದಲ್ಲಿ ಬೀಡುಬಿಟ್ಟಿದ್ದಾರೆ. ಗೀತಾ ಶಿವರಾಜ್‌ಕುಮಾರ್ ಪರ ಮತ ಕೇಳುತ್ತಿದ್ದಾರೆ. ಇತ್ತೀಚೆಗೆ ವೇದಿಕೆಯೊಂದರಲ್ಲಿ ಮಾತನಾಡಿರುವ ಅವರ ಮಾತುಗಳು ವೈರಲ್ ಆಗುತ್ತಿದೆ. ಬಿಜೆಪಿ ಪಕ್ಷದ ಬಗ್ಗೆ ದುನಿಯಾ ವಿಜಯ್ ವ್ಯಂಗ್ಯವಾಡಿದ್ದಾರೆ.
“ಬಿಜೆಪಿ ಪಕ್ಷ ಏನು ಮಾಡುತ್ತಿದೆ ಅಂದ್ರೆ, ಅವರಿಗಿರುವುದು ಒಂದೇ ಅಸ್ತ್ರ. ನಾವು ಮೊದಲಿನಿಂದಲೂ ಕಾಂಗ್ರೆಸ್ ಪಕ್ಷವನ್ನು ಕಟ್ಟಿಕೊಂಡು ಬಂದಿದ್ದೇವೆ. ಹಿಂದೂ- ಮುಸ್ಲಿ ಅಣ್ಣ-ತಮ್ಮ ಅಂತ ಅದನ್ನು ಒಡೆದು ಹಾಕಲು ಹಿಂದೂ-ಮುಸ್ಲಿಂ ನಡುವೆ ತಂದಿಡುತ್ತಿದ್ದಾರೆ. ನೀವು ಏನು ರಾಮಮಂದಿರ ಎನ್ನುತ್ತೀರಾ? ಅದಕ್ಕೆ ಇಟ್ಟಿಗೆ ಕೊಟ್ಟವರಲ್ಲಿ ನಾವು ಇದ್ದೇವೆ. ಅದಕ್ಕೆ ಕೆಲಸ ಮಾಡಿದ ಒಬ್ಬ ಮುಸಲ್ಮಾನ ಕೂಡ ಇದ್ದಾನೆ. ರಾಮನ ಸೇವೆ ಮುಸಲ್ಮಾನರು ಮಾಡಿದ್ದಾರೆ” ಎಂದು ದುನಿಯಾ ವಿಜಯ್ ಹೇಳಿದ್ದಾರೆ.
“ಅಕ್ಕ-ತಂಗಿಯರೇ, ಅಣ್ಣ-ತಮ್ಮಂದಿರೇ ಎಲ್ಲರೂ ಯೋಚನೆ ಮಾಡಿ. ನಮ್ಮ ನಡುವೆ ತಂದಿಟ್ಟು ಒಡೆದು ಹಾಕುವ ಪ್ರಯತ್ನ ಮಾಡುತ್ತಿದ್ದಾರೆ. ಇವರ ಬಳಿ ಇರುವುದು ಒಂದೇ ಅಸ್ತ್ರ. ಮುಸಲ್ಮಾನ ಕೆಟ್ಟವನು. ಮುಸಲ್ಮಾನ ದೇಶದ್ರೋಹಿ. ಮುಸಲ್ಮಾನ ಬೆಂಕಿ ಇಟ್ಟುಬಿಡುತ್ತಾನೆ ಎನ್ನುವುದು. ಎಲ್ಲಾ ಜನಾಂಗದಲ್ಲೂ ಕೆಟ್ಟವರು, ಒಳ್ಳೆಯವರು ಇರ್ತಾರೆ. ಒಬ್ಬರ ಮೇಲೆ ಆರೋಪ ಸರಿಯಲ್ಲ”
“ಬಂಗಾರಪ್ಪನವರು ಬರೀ ಸಿಎಂ ಆಗಿರಲಿಲ್ಲ. ದೊಡ್ಡ ಹೋರಾಟಗಾರರಾಗಿದ್ದರು. ಬಡವರ ಪರ ಇದ್ದರು. ಅವರ ಮೇಲಿನ ಗೌರವದಿಂದ ನೀವು ಬಂದಿದ್ದೀರಾ. ಇವತ್ತು ನಿಮ್ ಮನೆ ಬಾಗಲಿಗೆ ಅವರ ಹೆಣ್ಣು ಮಗು ಬಂದಿದೆ. ಆಶೀರ್ವಾದ ಮಾಡಬೇಕಿರುವುದು ನಿಮ್ಮ ಕೈಯಲ್ಲಿದೆ. ಸ್ವಾಭಿಮಾನ ಉಳಿಸಿಕೊಳ್ಳಬೇಕಾದ್ದು ನಿಮ್ಮ ಕೈಲಿದೆ.”
“ಗೀತಕ್ಕಗೆ ಸೇವೆ ಮಾಡುವ ಆಸೆಯಿದೆ. ರಾಜಕೀಯ ಮಾಡಬೇಕು ಎನ್ನುವುದು ಇಲ್ಲ. ಯಾರ ನಡುವೆ ತಂದಿಡುವ ಉದ್ದೇಶ ಇಲ್ಲ. ಸೇವೆ ಎನ್ನುವುದು ರಕ್ತದಲ್ಲೇ ಬಂದಿದೆ. ಒಬ್ಬ ಹೋರಾಟಗಾರನ ರಕ್ತ ಮತ್ತೆ ಬಂದು ಕೇಳ್ತಿದೆ. ನಾನು ಬಡವರ ಪರ ನಿಲ್ತೀನಿ, ನೀವು ನಿಲ್ಲಿ ಅಂತ. ನಾವು ಕೇಳುತ್ತಿರುವುದು ನಿಮ್ಮ ಆಶೀರ್ವಾದ. ಹಾಲು ಕೇಳಿದರೆ ಹಾಲು ಕೊಡ್ತೀರಾ. ಆದರೆ ಅವರು ವಿಷ ಕೊಟ್ಟು ಹಾಕಿ ಎನ್ನುತ್ತಿದ್ದಾರೆ.”
“ಯಾಕೆ ಕಾಂಗ್ರೆಸ್ ಬರಬೇಕು ಅಂದ್ರೆ, ನಮ್ಮಲ್ಲಿರುವ ಒಗ್ಗಟ್ಟು ಒಡೆಯಲು ಪದೇ ಪದೆ ಹಿಂದೂ- ಮುಸ್ಲಿಂ ನಡುವೆ ತಂದಿಡಲು ನೋಡುತ್ತಿದ್ದಾರೆ. ಹಾಗಾಗಿ ಎಚ್ಚರದಿಂದ ಇರಿ. ನಾನು, ಅನುಶ್ರೀ ಯಾಕೆ ಬಂದಿದ್ದೇವೆ ಅಂದ್ರೆ, ಗೀತಕ್ಕ ಪರ ಮತ ಕೇಳಲು ಬಂದಿದ್ದೇವೆ. ಈ ಬಾರಿ ನಿಮ್ಮ ಸೇವೆ ಮಾಡಲು, ಇಲ್ಲಿನ ಸಮಸ್ಯೆ ಬಗ್ಗೆ ದೆಹಲಿಯಲ್ಲಿ ಮಾತನಾಡಲು ಹೆಣ್ಣು ಮಗು ನಿಂತಿದೆ. ಅವರಿಗೆ ನಿಮ್ಮ ಆಶೀರ್ವಾದ ಬೇಕು” ಎಂದು ನಟ ದುನಿಯಾ ವಿಜಯ್ ಮನವಿ ಮಾಡಿದ್ದಾರೆ.