ಇಂತಹ ನೀಚರನ್ನ ಗೆಲ್ಲಿಸಬೇಕಾ ? ಪ್ರಜ್ವಲ್ ರೇವಣ್ಣ ವಿರುದ್ಧ ಸಿಡಿದೆದ್ದ ನಟಿ ಪೂನಂ ಕೌರ್..!
ಲೋಕಸಭಾ ಚುನಾವಣೆಯ ನಡುವೆ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ, ಕೇವಲ ಹಾಸನದಲ್ಲಿ ಅಷ್ಟೇ ಅಲ್ಲ ಕರುನಾಡಿನೆಲ್ಲೆಡೆ ತಲುಪಿದೆ. ಸಂಚಲನ ಸೃಷ್ಟಿಸಿದೆ. ರಾಜ್ಯದೆಲ್ಲೆಡೆ ಆಕ್ರೋಶದ ಅಲೆ ಎದ್ದಿದೆ. ಪ್ರತಿಭಟನೆಗಳು ಕೂಡ ನಡೆಯುತ್ತಿವೆ.
ಇನ್ನೂ ಪ್ರಕರಣದ ತನಿಖೆಗೆ ಕರ್ನಾಟಕ ಸರ್ಕಾರ ವಿಶೇಷ ತನಿಖಾ ತಂಡ (ಎಸ್‌ಐಟಿ)ವನ್ನು ರಚಿಸಿದೆ. ಪ್ರಜ್ವಲ್ ರೇವಣ್ಣ ಅವರನ್ನು ಪಕ್ಷದಿಂದ ಜೆಡಿಎಸ್ ಅಮಾನತುಗೊಳಿಸಿದೆ. ಇದೆಲ್ಲದರ ನಡುವೆ, ಮಾಜಿ ಸಚಿವ ರೇವಣ್ಣನ ಪುತ್ರ, ಹಾಸನ ಸಂಸದ ಪ್ರಜ್ವಲ್ ರೇವಣ್ಣ ಪೇರಿ ಕಿತ್ತಿದ್ದಾರೆ, ಜರ್ಮನಿಗೆ ಓಡಿ ಹೋಗಿದ್ದಾರೆ ಅನ್ನುವ ಸುದ್ದಿಯೂ ವ್ಯಾಪಕವಾಗಿ ಹಬ್ಬಿದೆ. ಇದೀಗ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಪೂನಂ ಕೌರ್ ಮಾತನಾಡಿದ್ದಾರೆ. ತಮ್ಮ ಆಕ್ರೋಶವನ್ನೂ ಹೊರ ಹಾಕಿದ್ದಾರೆ.
ಹೌದು, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಚಿತ್ರರಂಗದಲ್ಲಿ ಅಭಿನಯಿಸಿರುವ, ಕನ್ನಡದ ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ಅವರ ಬಂಧು ಬಳಗ ಚಿತ್ರದಲ್ಲೂ ನಟಿಸಿರುವ ಪೂನಂ ಕೌರ್ ಪ್ರಜ್ವಲ್ ರೇವಣ್ಣ ವಿರುದ್ಧ ಸಿಡಿದೆದ್ದಿದ್ದಾರೆ. ವಿಡಿಯೋ ಮೂಲಕ ತಮ್ಮ ಆಕ್ರೋಶವನ್ನ ಹೊರ ಹಾಕಿದ್ದಾರೆ.
2800ಕ್ಕೂ ಹೆಚ್ಚಿನ ಅಶ್ಲೀಲ ವಿಡಿಯೋಗಳಿವೆ. ಮಹಿಳೆಯರಿಗೆ ಬೆದರಿಕೆ ಹಾಕಿ, ಲೈಂಗಿಕ ದೌರ್ಜನ್ಯ ನಡೆಸಿರುವ ಆರೋಪ ಕೇಳಿ ಬಂದಿದೆ ಎಂದಿರುವ ಪೂನಂ ಕೌರ್ , ಹಣ ಮತ್ತು ರಾಜಕೀಯದ ಪ್ರಭಾವ ಇರುವ ಹಿನ್ನೆಲೆ, ಸರ್ಕಾರದಿಂದ ಕೂಡ ತಪ್ಪಿಸಿಕೊಂಡ ಎಂದಿದ್ದಾರೆ. ಕರ್ನಾಟಕದಿಂದ ಕಾಲ್ಕಿತ್ತು ಸದ್ಯಕ್ಕೆ ಪ್ರಜ್ವಲ್ ಜರ್ಮನಿಯಲ್ಲಿ ನೆಮ್ಮದಿಯಾಗಿದ್ದಾನೆ. ವಿಶ್ರಾಂತಿ ಪಡೆಯುತ್ತಿದ್ದಾನೆ ಎಂದಿರುವ ಪೂನಂ ಕೌರ್ ಇಂಥವರಿಗೆ ಮತ ಹಾಕಬೇಡಿ ಎಂದು ಮನವಿಯನ್ನೂ ಮಾಡಿದ್ದಾರೆ. ಜನ ತಿರುಗಿ ಬೀಳುವವರಿಗೂ ಇಂತವರನ್ನ ಶಿಕ್ಷಿಸಲು ಸಾಧ್ಯ ಇಲ್ಲ ಎಂದಿದ್ದಾರೆ.