ಘೋರ ಅಪರಾಧಗಳ ಬಗ್ಗೆ ಕೇಳಿದರೆ ಹೃದಯ ಘಾಸಿಯಾಗುತ್ತದೆ, ಮೋದಿ ಅವರೇ, ನೀವು ಇನ್ನೂ ಮೌನವಾಗಿರುತ್ತೀರಾ?” ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಆಕ್ರೋಶ
ನವದೆಹಲಿ, ಏಪ್ರಿಲ್. 29: ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಅವರ ಪೆನ್‌ಡ್ರೈವ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಕಿಡಿಕಾರಿದ್ದಾರೆ. ಬಿಜೆಪಿ- ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದು, ಈ ಬಗ್ಗೆ ಬಿಜೆಪಿ ಯಾವುದೇ ಮಾತನಾಡಿಲ್ಲ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಪ್ರಕರಣದ ಬಗ್ಗೆ ಮಾತನಾಡಿರುವ ಪಕ್ಷದ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಇನ್ನು ಮೌನ ವಹಿಸುತ್ತಾರೆಯೇ ಎಂದು ಪ್ರಶ್ನಿಸಿದ್ದಾರೆ. ಬಿಜೆಪಿ ನಾಯಕರೊಬ್ಬರು ಪಕ್ಷದ ಅಧ್ಯಕ್ಷರಿಗೆ ಪತ್ರ ಬರೆದು, “ಪ್ರಜ್ವಲ್ ರೇವಣ್ಣ ಅವರ ಸ್ಲೀಜ್ ವೀಡಿಯೊಗಳು” ಇರುವ ಪೆನ್ ಡ್ರೈವ್‌ನ ಬಗ್ಗೆ ಹೇಳಿದರೂ ಕೂಡ ಬಿಜೆಪಿಯು ಜೆಡಿಎಸ್ ಜೊತೆಗೆ ಏಕೆ ಮೈತ್ರಿಗೆ ಮುಂದಾಯಿತು ಎಂದು ಪ್ರಶ್ನೆ ಮಾಡಿದೆ.
ಮೋದಿ ಜೀ, ನೀವು ಇನ್ನೂ ಮೌನವಾಗಿರುತ್ತೀರಾ?
ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಹಿಂದಿಯಲ್ಲಿ ಬರೆದ ಪೋಸ್ಟ್‌ನಲ್ಲಿ, “ಪ್ರಧಾನಿ ಯಾರ ಭುಜದ ಮೇಲೆ ಕೈಯಿಟ್ಟು ಫೋಟೋ ತೆಗೆದುಕೊಳ್ಳುತ್ತಾರೋ.. 10 ದಿನಗಳ ಹಿಂದೆ ಸ್ವತಃ ಪ್ರಧಾನಿ ಅವರ ಪರ ಪ್ರಚಾರ ಮಾಡಿದರೋ…. ವೇದಿಕೆಯಲ್ಲಿ ಅವರನ್ನು ಹೊಗಳಿದರೋ ಆ ಕರ್ನಾಟಕದ ನಾಯಕ ಇಂದು ದೇಶದಿಂದ ತಲೆಮರೆಸಿಕೊಂಡಿದ್ದಾರೆ” ಎಂದು ಕಿಡಿಕಾರಿದ್ದಾರೆ.
“ಅವರು ಮಾಡಿದ ಘೋರ ಅಪರಾಧಗಳ ಬಗ್ಗೆ ಕೇಳಿದರೆ ಹೃದಯ ಘಾಸಿಯಾಗುತ್ತದೆ. ಅವರು ನೂರಾರು ಮಹಿಳೆಯರ ಜೀವನವನ್ನು ಹಾಳು ಮಾಡಿದ್ದಾರೆ. ಮೋದಿ ಅವರೇ, ನೀವು ಇನ್ನೂ ಮೌನವಾಗಿರುತ್ತೀರಾ?” ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಆಕ್ರೋಶ ಹೊರಹಾಕಿದ್ದಾರೆ.