December 23, 2024

ಬೆಳ್ತಂಗಡಿ ತಾಲೂಕು ಭಂಡಾರಿ ಸಮಾಜ ಸಂಘ: ವಾರ್ಷಿಕ ಮಹಾಸಭೆ ಭಂಡಾರಿ ಸಂಜೀವಿನಿ ವಿನೂತನ ಯೋಜನೆಗೆ ಚಾಲನೆ ಸ್ವಂತ ಕಟ್ಟಡ ರಚನೆಗೆ ನಿವೇಶನ ಕೊಡುಗೆ

0
ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಭಂಡಾರಿ ಸಮಾಜ ಸಂಘ ಹಾಗೂ ಭಂಡಾರಿ ಯುವ ವೇದಿಕೆ ಇದರ ೧೩ನೇ ವರ್ಷದ ವಾರ್ಷಿಕ ಮಹಾಸಭೆಯು ಏ.೧೬ ರಂದು ಸಂಘದ ಅಧ್ಯಕ್ಷರಾದ ಎಸ್. ಉಮೇಶ್ ಭಂಡಾರಿ ಉಜಿರೆ ಇವರ ಅಧ್ಯಕ್ಷತೆಯಲ್ಲಿ ಪಣೆಜಾಲು ಭಂಡಾರಿ ಸಮಾಜದ ಆವರಣದಲ್ಲಿ ಜರುಗಿತು. ವಾರ್ಷಿಕ ಮಹಾಸಭೆಯ ಪ್ರಯುಕ್ತ ಬೆಳಿಗ್ಗೆ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆಯನ್ನು ನೆರವೇರಿಸಲಾಯಿತು.

ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನದ ಅಧ್ಯಕ್ಷರಾದ ಲಕ್ಷ್ಮಣ ಕರಾವಳಿ ವಾರ್ಷಿಕ ಮಹಾಸಭೆಯ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ, ಭಂಡಾರಿ ಸಮಾಜದ ಎಲ್ಲಾ ಕಾರ್ಯಕ್ರಮಗಳಲ್ಲಿ ಅತೀ ಹೆಚ್ಚು ಭಂಡಾರಿ ಸಮಾಜ ಬಾಂಧವರು ಪಾಲ್ಗೊಳ್ಳುವ ಮೂಲಕ ಸಂಘಟನೆಯನ್ನು ಬಲಪಡೆಸುವಂತೆ ವಿನಂತಿಸಿದರು.

ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನದ ಉತ್ಸವ ಸಮಿತಿ-೨೦೨೪ ಇದರ ಅಧ್ಯಕ್ಷರಾದ ಪ್ರಸಾದ್ ಮುಯಾಲ್ ಮಾತನಾಡುತ್ತಾ, ಕಚ್ಚೂರು ನಾಗೇಶ್ವರ ದೇವಸ್ಥಾನದಲ್ಲಿ ನಡೆಯುವ ವಾರ್ಷಿಕ ಉತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಂಡಾರಿ ಸಮಾಜ ಬಾಂಧವರು ಭಾಗವಹಿಸುವಂತೆ ಮನವಿ ಮಾಡಿಕೊಂಡರು.

ಭಂಡಾರಿ ಸಂಜೀವಿನಿ ವಿನೂತನ ಯೋಜನೆಗೆ ಚಾಲನೆ
ಬೆಳ್ತಂಗಡಿ ತಾಲೂಕಿನ ಭಂಡಾರಿ ಸಮಾಜ ಬಾಂಧವರ ಕಷ್ಟಕ್ಕೆ ನೆರವಾಗುವ ಉದ್ಧೇಶದಿಂದ ಪ್ರಾರಂಭಿಸಲಾದ ಭಂಡಾರಿ ಸಂಜೀವಿನಿ ಎಂಬ ನೂತನ ಯೋಜನೆಯನ್ನು ಭಂಡಾರಿ ಮಹಾ ಮಂಡಲದ ಅಧ್ಯಕ್ಷರಾದ ಶಶಿಧರ ಭಂಡಾರಿ ಕಾರ್ಕಳ ಸಮಾಜಕ್ಕೆ ಅರ್ಪಣೆ ಮಾಡಿ ಮಾತನಾಡುತ್ತಾ, ಇದೊಂದು ಒಳ್ಳೆಯ ಯೋಜನೆಯಾಗಿದ್ದು, ಭಂಡಾರಿ ಸಮಾಜ ಬಾಂಧವರು ಈ ಯೋಜನೆಗೆ ಧನಸಹಾಯ ಮಾಡುವ ಮೂಲಕ ಇತರರ ಕಷ್ಟಕ್ಕೆ ನೆರವಾಗಬೇಕು. ಇದಕ್ಕಾಗಿ ಎಲ್ಲರು ಸಹಕರಿಸುವ ಅಗತ್ಯವಿದೆ ಎಂದರು.

ಇದೇ ಸಂದರ್ಭದಲ್ಲಿ ಅನಾರೋಗದಿಂದ ಬಳಲುತ್ತಿರುವ ಪ್ರವೀಣ್ ಭಂಡಾರಿ, ದೇರಾಜೆ ಇವರ ಚಿಕಿತ್ಸೆಗಾಗಿ ಹತ್ತು ಸಾವಿರ ರೂಪಾಯಿಯನ್ನು ಭಂಡಾರಿ ಸಂಜೀವಿನಿ ಯೋಜನೆಯ ಮೂಲಕ ನೀಡಲಾಯಿತು.

ನಿವೇಶನ ಕೊಡುಗೆ
ಸಂಘಕ್ಕೆ ಸ್ವಂತ ಕಟ್ಟಡ ಹೊಂದುವ ಉದ್ದೇಶಕ್ಕೆ ಹತ್ತು ಸೆಂಟ್ಸ್ ಜಾಗವನ್ನು ಕೊಡುಗೆಯಾಗಿ ನೀಡಿದ ಶಮಂತ್ ಕುಮಾರ್ ಜೈನ್ ಇವರನ್ನು ಸನ್ಮಾನಿಸಿ ಪುರಸ್ಕರಿಸಲಾಯಿತು.

ಪ್ರೀತ್ ಸಮೂಹ ಸಂಸ್ಥೆಯ ಮಾಲಕರಾದ ಅಮಿತ ಅಶೋಕ್ ಗುಂಡ್ಯಲ್ಕೆ ಮಾತನಾಡಿ, ಭಂಡಾರಿ ಸಮಾಜದ ಮಹಿಳೆಯರು ಸಂಘಟನೆಯಲ್ಲಿ ಸಕ್ರೀಯವಾಗಿ ಭಾಗವಹಿಸುವ ಮೂಲಕ ಮುಂಚೂಣಿಯಲ್ಲಿ ಬರುವಂತಾಗಬೇಕು ಎಂದರು.

ಸಂಘದ ಅಧ್ಯಕ್ಷರಾದ ಎಸ್. ಉಮೇಶ್ ಭಂಡಾರಿ ಇವರು ಮಾತನಾಡಿ ಕೇವಲ ಹಣಬಲದಿಂದ ಸಂಘ ಬೆಳೆಯಲು ಸಾಧ್ಯವಿಲ್ಲ. ಎಲ್ಲರೂ ಸಕ್ರೀಯವಾಗಿ ಭಾಗವಹಿಸಿದಾಗ ಮಾತ್ರ ಸಂಘದ ಅಭಿವೃದ್ದಿ ಸಾಧ್ಯ ಎಂದರು. ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಸಂಘದ ಕಾರ್ಯಚಟುವಟಿಕೆಯಲ್ಲಿ ಭಾಗವಹಿಸುವಂತೆ ಕರೆ ನೀಡಿದರು.

ಮಾಸ್ಟರ್ ಅವೆನ್ಯೂ ಇವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷರಾದ ಬಾಲಕೃಷ್ಣ ಭಂಡಾರಿ ಕೋಡ್ಯೇಲು ಸ್ವಾಗತಿಸಿದರು. ಸಂಘದ ಕಾರ್ಯದರ್ಶಿ ಅಶೋಕ್ ಭಂಡಾರಿ ಗುಂಡ್ಯಲ್ಕೆ ಸಂಘದ ವಾರ್ಷಿಕ ವರದಿ ವಾಚಿಸಿದರು. ಭಂಡಾರಿ ಯುವ ವೇದಿಕೆಯ ಅಧ್ಯಕ್ಷರಾದ ವಿಶ್ವನಾಥ ಭಂಡಾರಿ ಉಜಿರೆ ವಂದಿಸಿದರು. ಸಂಘದ ಜತೆಕಾರ್ಯದರ್ಶಿ ನಾರಾಯಣ ಬಿ. ಕುಂಡದಬೆಟ್ಟು ಕಾರ್ಯಕ್ರಮ ನಿರೂಪಿಸಿದರು. ಉದ್ಯಮಿ ಪ್ರವೀಣ್ ಭಂಡಾರಿ ವೇಣೂರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಮಹಾಸಭೆಯ ಬಳಿಕ ತಾಲೂಕಿನ ವಿವಿಧ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು..

ವರದಿ: ನಾರಾಯಣ.ಬಿ. ಕುಂಡದಬೆಟ್ಟು

Leave a Reply

Your email address will not be published. Required fields are marked *

ಇತ್ತೀಚಿನ ಸಂಪೂರ್ಣ ಸುದ್ದಿಗಳು