‘ನಿಮ್ಮ ಮತ ಯಾರಿಗೆ..?’ ಎಂದು ಕರೆ ಬರುತ್ತಿದ್ದೆಯೇ? ಮಾಹಿತಿ ಹಂಚಿಕೊಳ್ಳಬೇಡಿ, ಇದು ರಹಸ್ಯ ಮತದಾನದ ಸಂಪೂರ್ಣ ಉಲ್ಲಂಘನೆ: ಚುನಾವಣಾ ಆಯೋಗ
ಬೆಂಗಳೂರು, ಏಪ್ರಿಲ್. 21: ಇದು ಲೋಕಸಭಾ ಚುನಾವಣ ಸಮಯ. ಈ ವೇಳೆ ಹಲವು ಸಂಘ ಸಂಸ್ಥೆಗಳು, ಮಾಧ್ಯಮ ಸಂಸ್ಥೆಗಳು ಸಮೀಕ್ಷೆ ನಡೆಸುತ್ತವೆ. ಜನರ ನಾಡಿಮಿಡಿತ ಅರಿಯಲು ಪ್ರಯತ್ನಿಸುತ್ತಿರುತ್ತಾರೆ. ಆದರೆ, ಮತದಾನದ ಅಭಿಪ್ರಾಯ ಸಮೀಕ್ಷೆ ನಡೆಸುವ ನೆಪದಲ್ಲಿ ಮತದಾರರಿಗೆ ಬರುತ್ತಿರುವ ಕರೆಗಳು ವಂಚನೆಯ ಕರೆಗಳು ಎಂದು ಚುನಾವಣಾ ಅಧಿಕಾರಿಗಳು ತಿಳಿಸುತ್ತಾರೆ.
ಈ ಕರೆಗಳನ್ನು ಟ್ರೂಕಾಲರ್ ‘ಸ್ಕ್ಯಾಮ್’ ಎಂದು ರೆಡ್ ಟ್ಯಾಗ್ ಮಾಡಿದೆ. ಅಂತಹ ಕರೆಗಳನ್ನು ತೆಗೆದುಕೊಳ್ಳಬೇಡಿ ಅಥವಾ ಅವರು ಮಾಡಿದರೆ ಕರೆಗಳನ್ನು ಕಟ್ ಮಾಡಿ ಎಂದು ಜನರನ್ನು ಎಚ್ಚರಿಸಿದ್ದಾರೆ. ಇಂತಹ ಕರೆಗಳು ಭಾರತೀಯ ಚುನಾವಣೆಯನ್ನು ನಿರೂಪಿಸುವ ರಹಸ್ಯ ಮತದಾನದ ಸಂಪೂರ್ಣ ಉಲ್ಲಂಘನೆಯಾಗಿದೆ ಎಂದಿದ್ದಾರೆ
ಈ ಕರೆಗಳಲ್ಲಿ, “ನೀವು ಕಾಂಗ್ರೆಸ್‌ಗೆ ಮತ ಹಾಕುವುದಾದರೆ 1 ಒತ್ತಿರಿ, ನೀವು ಬಿಜೆಪಿಗೆ ಮತ ಹಾಕುತ್ತಿದ್ದರೆ ‘2’ ಒತ್ತಿ” ಎಂದು ಕೇಳುವ ಇಂತಹ ಸ್ವಯಂಚಾಲಿತ ಕರೆಗಳು ಬರುತ್ತಿರುವ ಬಗ್ಗೆ ಮತದಾರರು ವರದಿ ಮಾಡಿದ್ದಾರೆ. ಇಂತಹ ಕರೆಗಳ ಬಗ್ಗೆ ನಾಗರಿಕರಿಂದ ಮಾಹಿತಿ ಪಡೆದಿದ್ದೇವೆ ಎಂದು ಕರ್ನಾಟಕ ಮುಖ್ಯ ಚುನಾವಣಾಧಿಕಾರಿ (ಸಿಇಒ) ಕಚೇರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
“ನೆಟ್‌ವರ್ಕ್ ಸೇವಾ ಪೂರೈಕೆದಾರರಿಂದ ನಾಗರಿಕರ ಸಂಪರ್ಕ ಸಂಖ್ಯೆಗಳನ್ನು ಒದಗಿಸಲಾಗಿದೆ. ಕೆಲವು ಸಂದರ್ಭಗಳಲ್ಲಿ ಅವುಗಳನ್ನು ಮಾರಾಟ ಮಾಡಲಾಗಿದೆ ಎಂದು ತಿಳಿದುಬಂದಿದೆ. ಜನರು, ಸಂಸ್ಥೆಗಳು ಅಥವಾ ರಾಜಕೀಯ ಪಕ್ಷಗಳು ಅಭಿಪ್ರಾಯ ಸಂಗ್ರಹಣೆಯನ್ನು ಮಾಡಬಹುದು. ಆದರೆ ಹೆಸರು, ವಯಸ್ಸು, ಲಿಂಗ, ವೃತ್ತಿ, ಜಾತಿ, ಇತ್ಯಾದಿ ಸೇರಿದಂತೆ ನಾಗರಿಕರ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸುವುದು ಅಪರಾಧವಾಗಿದೆ” ಎಂದು ಅಧಿಕಾರಿಗಳು ಹೇಳಿದ್ದಾರೆ.
ಜನರ ದೂರವಾಣಿ ಸಂಖ್ಯೆಗಳನ್ನು ಸಂಗ್ರಹಿಸುವುದು ಮತ್ತು ವಿತರಿಸುವುದು ಸಹ ಅಪರಾಧವಾಗಿದೆ. ಜನರು ಇದರಲ್ಲಿ ಭಾಗವಹಿಸಬೇಡಿ, ಯಾವುದೇ ವಿವರಗಳನ್ನು ಹಂಚಿಕೊಳ್ಳಬೇಡಿ ಮತ್ತು ಸಮಸ್ಯೆಯನ್ನು ತಕ್ಷಣವೇ ಚುನಾವಣಾ ಅಧಿಕಾರಿಗಳಿಗೆ cVigil ಆ್ಯಪ್‌ನಲ್ಲಿ ಅಥವಾ ‘1950’ ಗೆ ವರದಿ ಮಾಡುವಂತೆ ನಾವು ಮನವಿ ಮಾಡುತ್ತೇವೆ. ನಾವು ವಿವರಗಳನ್ನು ಸಂಗ್ರಹಿಸುತ್ತಿದ್ದೇವೆ ಮತ್ತು ದೂರು ದಾಖಲಿಸಿ ನಂತರ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.