ಗೃಹಲಕ್ಷ್ಮಿ ಯೋಜನೆಯ ಹಣದಿಂದ ಅನುಕೂಲವಾಯಿತು- ಪಿಯುಸಿ ಟಾಪರ್
ಬೆಂಗಳೂರು, ಏಪ್ರಿಲ್ 10: 2023-24ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಇಂದು (ಏಪ್ರಿಲ್ 10) ಬುಧವಾರ ಪ್ರಕಟವಾಗಿದೆ. ಈ ಬಾರಿ 84.87% ಬಾಲಕಿಯರು ಉತ್ತೀರ್ಣರಾಗಿದ್ದು, 76.98% ಬಾಲಕರು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಇನ್ನು ವಿಜ್ಞಾನ ವಿಭಾಗ 89.96% , ವಾಣಿಜ್ಯ ವಿಭಾಗ 80.94%, ಕಲಾ ವಿಭಾಗದಲ್ಲಿ 68.36 % ಫಲಿತಾಂಶ ಬಂದಿದೆ.
ವಿಜ್ಞಾನ ವಿಭಾಗದಲ್ಲಿ ಹುಬ್ಬಳ್ಳಿಯ ವಿದ್ಯಾಲಕ್ಷ್ಮೀ 600ಕ್ಕೆ 598 ಅಂಕಗಳನ್ನು ಪಡೆದು ಪ್ರಥಮ ಸ್ಥಾನ ಪಡೆದಿದ್ದರೆ, ವಾಣಿಜ್ಯ ವಿಭಾಗದಲ್ಲಿ ತುಮಕೂರಿನ ಜ್ಞಾನವಿ 600ಕ್ಕೆ 597 ಅಂಕ ಪಡೆದು ಟಾಪರ್ ಆಗಿದ್ದಾರೆ. ಕಲಾ ವಿಭಾಗದಲ್ಲಿ ಮೂವರು ಟಾಪರ್ಗಳಾಗಿದ್ದಾರೆ. ಕಲಾ ವಿಭಾಗದಲ್ಲಿ ಮೇಧಾ ಡಿ. ಟಾಪರ್ 600ಕ್ಕೆ 596 ಅಂಕಗಳನ್ನು ಪಡೆದರೆ, ವಿಜಯಪುರದ ವೇದಾಂತ್ ಜ್ಞಾನುಭನವಿ ಮತ್ತು ಕವಿತಾ ಬಿ.ವಿ 600ಕ್ಕೆ 596 ಅಂಕ ಪಡೆದಿದ್ದಾರೆ.
ಈ ಪೈಕಿ ಕಲಾ ವಿಭಾಗದ ಟಾಪರ್ ಆದ ವಿಜಯಪುರದ ವೇದಾಂತ್ ಜ್ಞಾನುಭನವಿ ತನ್ನ ಕುಟುಂಬದ ಪರಿಸ್ಥಿತಿಯನ್ನು ವಿವರಿಸುವ ವೇಳೆ ರಾಜ್ಯ ಸರ್ಕಾರದಿಂದ ಬಂದ ಗೃಹಲಕ್ಷ್ಮಿ ಯೋಜನೆಯ ಹಣದಿಂದ ಅನುಕೂಲವಾಯಿತು ಎಂದು ಹೇಳಿದ್ದಾನೆ. ಈ ವಿಚಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.