ಪ್ರಚಾರದ ವೇಳೆ ಯುವತಿಗೆ ಮುತ್ತಿಟ್ಟ ಬಿಜೆಪಿ ಅಭ್ಯರ್ಥಿ: ಫೋಟೋ ವೈರಲ್
ದೇಶದಲ್ಲಿ ರಣಬಿಸಿಲು ಹಾಗೂ ಚುನಾವಣೆಯ ಕಾವು ಏರುತ್ತಲೆ ಇವೆ. ಅಭ್ಯರ್ಥಿಗಳು ಮತ ಬೇಟೆಗೆ ಭಿನ್ನ ವಿಭಿನ್ನ ತಂತ್ರವನ್ನು ಅನುಸರಿಸುತ್ತಾರೆ. ಮತದಾರರ ಮನ ಒಲಿಸಲು ಅಭ್ಯರ್ಥಿಗಳು ದನ ಮೇಸಿ ಗಮನ ಸೆಳೆದರೆ, ಇನ್ನೊಮ್ಮೆ ಗದ್ದೆಯಲ್ಲಿ ಕೆಲಸ ಮಾಡಿ ಸುದ್ದಿಯಲ್ಲಿರುತ್ತಾರೆ. ಇಂತಹ ಚಿತ್ರಗಳು ಸಾಮಾಜಿಕ ತಾಣಗಳಲ್ಲಿ ನೀವು ಆಗಾಗ್ಗೆ ನೋಡುತ್ತಲೆ ಇರುತ್ತೀರಿ. ಆದರೆ, ಈ ಬಿಜೆಪಿ ಅಭ್ಯರ್ಥಿ ಮಾಡಿರುವ ಕೆಲಸವನ್ನು ನೀವು ಬೇರೆ ಕಡೆ ನೋಡುವುದು ಕಷ್ಟ.
ಪಶ್ಚಿಮ ಬಂಗಾಳದ ಉತ್ತರ ಮಾಲ್ಡಾ ಕ್ಷೇತ್ರದ ಅಭ್ಯರ್ಥಿ ಖಗೆನ್ ಮುರ್ಮು ಈ ಒಂದು ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ. ಈ ಫೋಟೋದಲ್ಲಿ ಬಿಜೆಪಿ ಅಭ್ಯರ್ಥಿ ಯುವತಿಗೆ ಚುಂಬಿಸುವ ದೃಶ್ಯ ಸಖತ್ ವೈರಲ್ ಆಗುತ್ತಿದೆ. ಈ ಒಂದು ಚಿತ್ರ ವಿರೋಧ ಪಕ್ಷಗಳಿಗೆ ಆಹಾರವಾಗಿದೆ.
ನಡೆದಿದ್ದು ಎಲ್ಲಿ?
ಬಂಗಾಳದ ಉತ್ತರ ಮಾಲ್ಡಾ ಜಿಲ್ಲೆಯ ಶ್ರೀಹಿಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಬಿಜೆಪಿ ಇಲ್ಲಿಂದ ಖಗೇನ್ ಮುರ್ಮು ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿದೆ. ಟಿಎಂಸಿ ಜಿಲ್ಲಾ ಉಪಾಧ್ಯಕ್ಷ ದುಲಾಲ್ ಸರ್ಕಾರ್ ಈ ವೈರಲ್ ಫೋಟೋ ಕುರಿತು ಬಿಜೆಪಿ ಅಭ್ಯರ್ಥಿಯನ್ನು ಟೀಕಿಸಿದ್ದಾರೆ.
ಈ ಚಿತ್ರವನ್ನು ಟಿಎಂಸಿ ಅಭ್ಯರ್ಥಿ ಹಂಚಿಕೊಂಡಿದ್ದು, ಸಾಮಾಜಿಕ ತಾಣದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಟಾರ್ಗೆಟ್ ಮಾಡಿದೆ. ಈ ಫೋಟೋ ವೈರಲ್ ಆಗುತ್ತಿದ್ದಂತೆ, ಈ ಬಗ್ಗೆ ಬಿಜೆಪಿ ಅಭ್ಯರ್ಥಿ ಖಗೇನ್ ಮುರ್ಮು ಕೂಡ ಸ್ಪಷ್ಟನೇ ನೀಡಿದ್ದಾರೆ. ಯುವತಿ ನನ್ನ ಮಗಳಿದ್ದಂತೆ ಎಂದು ಬಣ್ಣಿಸಿದ ಅವರು ಮಗಳಿಗೆ ಮುತ್ತು ನೀಡುವುದರಲ್ಲಿ ತಪ್ಪಿಲ್ಲ ಎಂದು ತಿಳಿಸಿದ್ದಾರೆ.
ಫೋಟೋ ವೈರಲ್
ಈ ಚಿತ್ರ ಬಂಗಾಳ ರಾಜಕೀಯದಲ್ಲಿ ಸಂಚಲವನ್ನು ಮೂಡಿಸಿದೆ. ಈ ಬಗ್ಗೆ ಟಿಎಂಸಿ ಬಿಜೆಪಿ ಅಭ್ಯರ್ಥಿಯನ್ನು ಗುರಿಯಾಗಿಸಿ ಪೋಸ್ಟ್ ಮಾಡಿದೆ. ಪಶ್ಚಿಮ ಬಂಗಾಳದ ಆಡಳಿತ ಪಕ್ಷ ತೃಣಮೂಲ ಕಾಂಗ್ರೆಸ್ (ಟಿಎಂಸಿ) ತನ್ನ ಸಾಮಾಜಿಕ ತಾಣದಲ್ಲಿ ಬಿಜೆಪಿ ಅಭ್ಯರ್ಥಿ ಯುವತಿಯನ್ನು ಚುಂಬಿಸುತ್ತಿರುವ ಚಿತ್ರಣವನ್ನು ಹಂಚಿಕೊಂಡಿದೆ.