ಪ್ರಧಾನಿ ಮೋದಿ ರೋಡ್ ಶೋ ವೇಳೆ ಕುಸಿದ ವೇದಿಕೆ; ಏಳು ಮಂದಿಗೆ ಗಾಯ
ಪ್ರಧಾನಿ ನರೇಂದ್ರ ಮೋದಿ ಭಾನುವಾರ ಜಬಲ್ಪುರದಲ್ಲಿ ರೋಡ್ ಶೋ ನಡೆಸುವ ಮೂಲಕ ಮಧ್ಯಪ್ರದೇಶದಲ್ಲಿ ಲೋಕಸಭಾ ಚುನಾವಣಾ ಪ್ರಚಾರ ಆರಂಭಿಸಿದ್ದಾರೆ. ಪ್ರಧಾನಮಂತ್ರಿಯವರ ರೋಡ್ ಶೋ ನೋಡಲು ಸಾವಿರಾರು ಜನ ಸೇರಿದ್ದರು. ಮೋದಿ ರೋಡ್ ಶೋ ಸಂದರ್ಭದಲ್ಲಿ ಜಬಲ್ಪುರದಲ್ಲಿ ವೇದಿಕೆ ಕುಸಿದ ಪರಿಣಾಮ ಏಳು ಮಂದಿ ಗಾಯಗೊಂಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ನಗರ ಪೊಲೀಸ್ ವರಿಷ್ಠಾಧಿಕಾರಿ ಎಚ್.ಆರ್.ಪಾಂಡೆ ಘಟನೆಯ ಬಗ್ಗೆ ಮಾಹಿತಿ ನೀಡಿ, ‘ಪ್ರಧಾನಿ ನರೇಂದ್ರ ಮೋದಿ ಅವರ ರೋಡ್ ಶೋ ವೇಳೆ ರಾಂಪುರ-ಗೋರಖ್‌ಪುರ ರಸ್ತೆಯ ರಸ್ತೆ ಬದಿಯಲ್ಲಿ ಸ್ವಾಗತ ವೇದಿಕೆ ನಿರ್ಮಿಸಲಾಗಿತ್ತು. ಪ್ರಧಾನ ಮಂತ್ರಿಯವರ ವಾಹನವು ವೇದಿಕೆಯ ಮುಂದೆ ಹಾದುಹೋದ ತಕ್ಷಣ, ಜನರು ಅವರನ್ನು ನೋಡಲು ವೇದಿಕೆಯ ಮೇಲೆ ಹತ್ತಿದರು, ಇದರಿಂದಾಗಿ ವೇದಿಕೆ ಕುಸಿದಿದೆ.’ ಎಂದು ಹೇಳಿದ್ದಾರೆ.
“ಪ್ರಧಾನಿ ಬೆಂಗಾವಲು ಪಡೆ ಮುಂದೆ ಸಾಗಿದ ಕೂಡಲೇ ವೇದಿಕೆ ಕುಸಿದುಬಿತ್ತು. ಈ ಘಟನೆಯಲ್ಲಿ ಏಳು ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳ ಪೈಕಿ ಓರ್ವ ಬಾಲಕಿ ಹಾಗೂ ಓರ್ವ ಪೊಲೀಸ್ ಸಿಬ್ಬಂದಿ ಸೇರಿದಂತೆ ನಾಲ್ವರಿಗೆ ಮೂಳೆ ಮುರಿತವಾಗಿದೆ. ಮೂವರು ಮಹಿಳೆಯರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಈ ಘಟನೆಯಿಂದಾಗಿ ರೋಡ್ ಶೋ ವೇಳೆ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಭದ್ರತಾ ಸಿಬ್ಬಂದಿ ತಕ್ಷಣ ಪರಿಸ್ಥಿತಿಯನ್ನು ಹತೋಟಿಗೆ ತಂದರು” ಎಂದು ಸಿಎಸ್‌ಪಿ ಪಾಂಡೆ ತಿಳಿಸಿದ್ದಾರೆ.