ಕರಾವಳಿಗೆ ಗುಡ್ ನ್ಯೂಸ್! ಎ. 8ರಿಂದ ಕರಾವಳಿ ಜಿಲ್ಲೆಗಳಲ್ಲಿ ಭರ್ಜರಿ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ
ಕರ್ನಾಟಕದಲ್ಲಿ ಮಳೆ ಕೊರತೆ ಕಾರಣ ಭೂಮಿ ಬಾಯಿ ಬಿಟ್ಟಿದ್ದು, ಜನ ಕೂಡ ಹನಿ ಹನಿ ನೀರಿಗೂ ಪರದಾಡುತ್ತಿದ್ದಾರೆ. ಅದ್ರಲ್ಲೂ ಮಳೆಯ ತವರು ಅಂತಾನೆ ಕರೆಸಿಕೊಳ್ಳುವ ನಮ್ಮ ರಾಜ್ಯದ ಮಲೆನಾಡು ಭಾಗದಲ್ಲೂ ಮಳೆಗೆ ಭಾರಿ ಕೊರತೆ ಉಂಟಾಗಿದೆ. ಹೀಗಿದ್ದಾಗ ಭರ್ಜರಿ ಮಳೆ ಅಬ್ಬರ ಶುರುವಾಗುತ್ತಿದೆ. ಹಾಗಾದರೆ ಕರ್ನಾಟಕದ ಯಾವ ಯಾವ ಜಿಲ್ಲೆಯಲ್ಲಿ ಈಗ ಮಳೆ ಅಬ್ಬರ ಶುರುವಾಗಿದೆ? ಎಲ್ಲೆಲ್ಲಿ ಜೋರು ಮಳೆ ಬೀಳಲಿದೆ? ಬನ್ನಿ ತಿಳಿಯೋಣ.
ಕಳೆದ ಕೆಲ ದಿನಗಳಿಂದ ಕರ್ನಾಟಕದ ಕೊಡಗು, ಚಿಕ್ಕಮಗಳೂರು, ದಾವಣಗೆರೆ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮಳೆಯ ಆರ್ಭಟ ಜೋರಾಗಿದೆ. ಅದ್ರಲ್ಲೂ ಉತ್ತರ ಕರ್ನಾಟಕದ ಕೆಲ ಭಾಗದಲ್ಲಿ ಮಳೆ ಬಿದ್ದಿರುವ ಮಾಹಿತಿ ಹೊರಬಿದ್ದಿದೆ. ಈ ನಡುವೆ ಮುಂದಿನ ಕೆಲವು ದಿನ, ಕರ್ನಾಟಕದಲ್ಲಿ ಭರ್ಜರಿ ಮಳೆ ಬೀಳಲಿದೆ ಅಂತಾ ಹವಾಮಾನ ಇಲಾಖೆ ಮುನ್ಸೂಚನೆಯನ್ನ ನೀಡಿದೆ. ಅದರಲ್ಲೂ ಕರ್ನಾಟಕದ ರಾಜಧಾನಿ ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಿಗೆ ಮಳೆಯ ಸಿಂಚನ ಆಗುವುದು ಗ್ಯಾರಂಟಿ ಆಗಿದ್ದು, ಆ ಬಗ್ಗೆ ಮಾಹಿತಿಗೆ ಮುಂದೆ ಓದಿ.
ಕರ್ನಾಟಕದಲ್ಲಿ ಮಳೆ ಯಾವಾಗ?
ಏಪ್ರಿಲ್ 6 ರಂದು ಅಂದರೆ ನಾಳೆ ಕೊಡಗು, ಚಿಕ್ಕಮಗಳೂರು, ಮೈಸೂರು, ಮಂಡ್ಯ ಹಾಗೂ ಹಾಸನ ಜಿಲ್ಲೆಗಳಲ್ಲಿ ಹಗುರ ಮಳೆ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಇದೀಗ ಮಾಹಿತಿ ನೀಡಿದೆ. ಇದರ ಜೊತೆಗೇ, ಏಪ್ರಿಲ್ 8ಕ್ಕೆ ದಕ್ಷಿಣ ಕನ್ನಡ, ಉಡುಪಿ, ಬೀದರ್, ಕಲಬುರಗಿ, ವಿಜಯಪುರ, ಕೊಪ್ಪಳ, ಬಳ್ಳಾರಿ, ಚಿತ್ರದುರ್ಗ, ಚಿಕ್ಕಮಗಳೂರು, ಹಾಸನ, ಕೊಡಗು ಸೇರಿ ಮಂಡ್ಯ, ಶಿವಮೊಗ್ಗ & ಮೈಸೂರು ಜಿಲ್ಲೆಗಳಲ್ಲಿ ಮಳೆ ಬೀಳುವ ಸಾಧ್ಯತೆ ಇದೆ. ಮತ್ತೊಂದ್ಕಡೆ, ರಾಜಧಾನಿ ಬೆಂಗಳೂರಿನಲ್ಲಿ ಯುಗಾದಿ ಹಬ್ಬದ ಬಳಿಕ ಅಂದ್ರೆ, ಏಪ್ರಿಲ್ 13 ಹಾಗೂ 14 ಕ್ಕೆ ಭರ್ಜರಿ ಮಳೆ ಬೀಳುವ ನಿರೀಕ್ಷೆ ಇದೆ.