ಸುಮಲತಾ ಬಿಜೆಪಿ ಸೇರ್ಪಡೆ: ಇದು ಹೊಸ ಅಧ್ಯಯ ಎಂದ ರೆಬಲ್ ಲೇಡಿ
ಬೆಂಗಳೂರು, ಏಪ್ರಿಲ್ 05: ಮಂಡ್ಯ ಸೊಸೆ ಸುಮಲತಾ ಅಂಬರೀಶ್ ಅವರು 2019 ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಪಕ್ಷೇತರವಾಗಿ ಸ್ಪರ್ಧಿಸಿ ಪ್ರಚಂಡ ಬಹುಮತದಿಂದ ಗೆಲುವು ಸಾಧಿಸಿದ್ದರು. 2023 ರ ವಿಧಾನಸಭಾ ಚುನಾವಣೆಯಲ್ಲಿ ಬಾಹ್ಯ ಬೆಂಬಲ ಘೋಷಿಸಿದ್ದ ಸುಮಲತಾ ಅಂಬರೀಶ್ ಅವರು, ಶುಕ್ರವಾರ ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾಗಿದ್ದಾರೆ.
ಮಂಡ್ಯ ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಮುಂದಿನ ರಾಜಕೀಯ ಭವಿಷ್ಯದ ಕುರಿತು ಸಾಕಷ್ಟು ಗೊಂದಲದಲ್ಲಿದ್ದ ಸುಮಲತಾ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯವೈಖರಿಗೆ ಮೆಚ್ಚಿ ಇಂದು ( ಶುಕ್ರವಾರ) ಬಿಜೆಪಿ ಸೇರ್ಪಡೆಯಾಗಿದ್ದಾರೆ. ಬಿಜೆಪಿ ಪಕ್ಷದ ಬಾವುಟವನ್ನು ಹಸ್ತಾಂತರಿಸುವ ಮೂಲಕ ಎಲ್ಲ ಮುಖಂಡರಿಗೆ ಬಿಜೆಪಿಗೆ ಸ್ವಾಗತ ಕೋರಲಾಯಿತು.
ಇನ್ನೂ ಈ ವೇಳೆ ಸುಮಲತಾ ಅಂಬರೀಶ್ ಅವರು ಮಾತನಾಡಿ, ಇದು ಹೊಸ ಅಧ್ಯಯ ಎಂದು ಹೇಳಿದ್ದಾರೆ. ಮಂಡ್ಯ ಜಿಲ್ಲೆಯ ಸಮಗ್ರ ಅಭಿವೃದ್ಧಿಯೇ ನನ್ನ ಮೂಲ ಮಂತ್ರವಾಗಿದೆ. ಮೋದಿ ಮತ್ತೊಮ್ಮೆ ಪ್ರಧಾನಿಯಾಗಲಿ ಎಂಬ ಆಶಯದಿಂದ ಬಿಜೆಪಿಗೆ ಸೇರ್ಪಡೆಯಾಗುತ್ತಿದ್ದೇನೆ. ಮಂಡ್ಯದ ನನ್ನ ಅಭಿಮಾನಿಗಳು, ನಟ ದಿ.ಅಂಬರೀಶ್ ಅಭಿಮಾನಿಗಳು ಹಿತೈಷಿಗಳ ಹಾರೈಕೆ ಮತ್ತು ಆಶೀರ್ವಾದವಿರಲಿ ಎಂದು ತಿಳಿಸಿದ್ದಾರೆ.