ಚುನಾವಣಾ ರಾಜಕೀಯದಿಂದ ಹಿಂದೆ ಸರಿಯಲು ನಿರ್ಧರಿಸಿದ್ದೇನೆ! ಸಿಎಂ ಸಿದ್ದರಾಮಯ್ಯ ಹೇಳಿಕೆಯಿಂದ ಅಭಿಮಾನಿಗಳಲ್ಲಿ ಆಘಾತ
ಮೈಸೂರು, ಏಪ್ರಿಲ್ 02: ಲೋಕಸಭಾ ಚುನಾವಣೆಯ ಪ್ರಚಾರದಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ಮೈಸೂರಿನಲ್ಲಿ ಚುನಾವಣಾ ರಾಜಕೀಯ ನಿವೃತ್ತಿ ಕುರಿತು ತವರು ಕ್ಷೇತ್ರದಲ್ಲಿಯೇ ಘೋಷಣೆ ಮಾಡಿದ್ದಾರೆ. ಸಿದ್ದರಾಮಯ್ಯ ಅವರ ನಿರ್ಧಾರ ಅವರ ಅಭಿಮಾನಿಗಳಲ್ಲಿ ಆಘಾತ ನೀಡಿದೆ.
ಜಿಲ್ಲೆಯಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿರುವ ಅವರು, ನನಗೆ ವಯಸ್ಸಾಗುತ್ತಿದೆ. ಮುಂದಿನ ನಾಲ್ಕು ವರ್ಷದ ಬಳಿಕ ವಿಧಾನಸಭಾ ಚುನಾವಣೆ ಎದುರಾಗುತ್ತದೆ. ನಾನು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಚುನಾವಣಾ ರಾಜಕೀಯದಿಂದ ಹಿಂದೆ ಸರಿಯಲಿದ್ದೇನೆ ಎಂದು ಅವರು ತಿಳಿಸಿದರು. ಜೊತೆಗೆ ಈ ನಿರ್ಧಾರಕ್ಕೆ ಕಾರಣಗಳೇನು ಎಂಬುದನ್ನು ಸ್ವತಃ ಸಿದ್ದರಾಮಯ್ಯ ಅವರೇ ವಿವರಿಸಿದ್ದಾರೆ.
ಅವರವರ ದೇಹಸ್ಥಿತಿ, ಆರೋಗ್ಯದ ಬಗ್ಗೆ ಅವರಿಗೇ ಗೊತ್ತಿರುತ್ತದೆ. ನನಗೆ ಮೊದಲಿನಂತೆ ಉತ್ಸಾಹ ಭರಿತವಾಗಿ ಕೆಲಸ ಮಾಡಲು ಆಗುತ್ತಿಲ್ಲ. ನನಗೆ ಯಾವ ಆತಂಕ ಇಲ್ಲ. ಆತಂಕ ಇದ್ದರೆ ಮಾತ್ರ ಟೆನ್ಷನ್ ಇರುತ್ತದೆ. ನನಗೆ ಆ ರೀತಿ ಏನು ಇಲ್ಲ. ಹೀಗಾಗಿ ನಾನು ಚುನಾವಣಾ ರಾಜಕಾರಣದಿಂದ ಹಿಂದೆ ಸರಿಯುವ ನಿರ್ಧಾರ ಮಾಡಿದ್ದೇನೆ ಎಂದು ಅವರು ಸ್ಪಷ್ಟಪಡಿಸಿದರು.
ಈ ಹಿಂದೆಯು ಕೆಲವು ಭಾರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜಕೀಯ ನಿವೃತ್ತಿ ಘೋಷಣೆ ಕುರಿತು ಮಾತನಾಡಿದ್ದರು. 2023ರಲ್ಲಿ ಏಪ್ರಿಲ್ ನಲ್ಲಿ ಮುಂಬರಲಿರುವ ವಿಧಾನಸಭಾ ಚುನಾವಣಾ ರಾಜಕಾರಣದಿಂದ ಹಿಂದೆ ಸರಿಯುತ್ತೇನೆ ಎಂದು ಹೇಳಿದ್ದರು. ಆಗ ಅವರು ವಿಪಕ್ಷ ನಾಯಕರಾಗಿದ್ದರು.
ಅದಕ್ಕೂ ಮೊದಲು ಬಾದಾಮಿ ವಿಧಾನಸಭಾ ಕ್ಷೇತ್ರದಲ್ಲಿ ಬಿ.ಶ್ರೀರಾಮುಲು ವಿರುದ್ಧ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ವೇಳೆ ಸಿಎಂ ಸಿದ್ದರಾಮಯ್ಯ ಅವರು ಇದೇ ನನ್ನ ಕೊನೆಯ ಚುನಾವಣೆ ಆಗಲಿದೆ. ಮುಂದೆ ಮತ್ತೆ ನಾನು ಚುನಾವಣೆ ನಿಲ್ಲುವುದಿಲ್ಲ. ಚುನಾವಣಾ ರಾಜಕೀಯದಿಂದ ನಿವೃತ್ತಿ ಪಡೆಯುತ್ತೇನೆ ಎಂದಿದ್ದರು.