ರಾಜ್ಯದ ಜನತೆಗೆ ಗುಡ್ ನ್ಯೂಸ್: ತಡೆರಹಿತ ನಿರಂತರ ವಿದ್ಯುತ್ ಪೂರೈಕೆಗೆ ಮಹತ್ವದ ಕ್ರಮ
ಬೆಂಗಳೂರು, ಏಪ್ರಿಲ್ 02: ನಿರಂತರ ವಿದ್ಯುತ್ ಪೂರೈಸುವ ನಿಟ್ಟಿನಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತವು ಮೈಸೂರು ಮತ್ತು ಗುಲ್ಬರ್ಗ ಪ್ರದೇಶಗಳ 400 ಕೆ.ವಿ.ವರೆಗಿನ ಪ್ರಸರಣ ಮಾರ್ಗಗಳು ಮತ್ತು ಸಬ್‌ಸ್ಟೇಷನ್‌ಗಳ ನಿರ್ವಹಣೆಗಾಗಿ ಎರಡು ಇನ್ಸುಲೇಟೆಡ್ ಏರಿಯಲ್ ವರ್ಕ್ ಪ್ಲಾಟ್‌ಫಾರ್ಮ್ ವಾಹನಗಳನ್ನು ನಿಯೋಜಿಸಲಿದೆ.
ಸಾಮಾನ್ಯವಾಗಿ ವಿದ್ಯುತ್ ಮಾರ್ಗಗಳ ನಿರ್ವಹಣೆಗಾಗಿ ತಾಸುಗಟ್ಟಲೆ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಬೇಕಾಗುತ್ತದೆ. ಆದರೆ, ಇನ್ಸುಲೇಟೆಡ್ ಏರಿಯಲ್ ವರ್ಕ್ ಪ್ಲಾಟ್‌ಫಾರ್ಮ್ ವಾಹನಗಳ ಬಳಕೆಯಿಂದ ಗ್ರಾಹಕರಿಗೆ ತಡೆರಹಿತ ವಿದ್ಯುತ್ ಪೂರೈಕೆ ಸಾಧ್ಯವಾಗಲಿದೆ. ಹಾಗಾಗಿ ಈ ತಂತ್ರಜ್ಞಾನದ ಬಳಕೆಗೆ ಒತ್ತು ನೀಡಲಾಗುತ್ತಿದೆ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೆಂಗಳೂರು, ಚಿತ್ರದುರ್ಗ ಮತ್ತು ಹುಬ್ಬಳ್ಳಿಯಲ್ಲಿ ಈಗಾಗಲೇ ಇಂತಹ ಮೂರು ಇನ್ಸುಲೇಟೆಡ್ ಏರಿಯಲ್ ವರ್ಕ್ ಪ್ಲಾಟ್‌ಫಾರ್ಮ್ ವಾಹನಗಳು ಕಾರ್ಯನಿರ್ವಹಿಸುತ್ತಿವೆ. ಇವುಗಳಿಂದ ಕೆಪಿಟಿಸಿಎಲ್‌ಗೆ ಕೋಟ್ಯಂತರ ರೂಪಾಯಿಗಳ ಉಳಿತಾಯವಾಗುತ್ತದೆ ಎಂದು ಇಂಧನ ಸಚಿವ ಕೆ.ಜೆ ಜಾರ್ಜ್ ತಿಳಿಸಿದ್ದಾರೆ.
ಸಾಂಪ್ರದಾಯಿಕ ವಿಧಾನದಲ್ಲಿ ಪ್ರಸರಣ ಮಾರ್ಗಗಳ ದುರಸ್ಥಿ ಅಥವಾ ನಿರ್ವಹಣೆಗೆ ವಿದ್ಯುತ್ ಲೈನ್ ಸ್ಥಗಿತಗೊಳಿಸುವುದು ಅನಿವಾರ್ಯ. ಅದೇ ರೀತಿ ಸ್ಥಗಿತಗೊಂಡ ವಿದ್ಯುಚ್ಛಕ್ತಿಯ ಮರುಸ್ಥಾಪನೆಗೆ ಕನಿಷ್ಠ 5 ಗಂಟೆಗಳ ಕಾಲಾವಕಾಶ ಬೇಕು. ಆದರೆ, ಹಾಟ್ (ಲೈವ್) ಲೈನ್ ನಿರ್ವಹಣೆ ತಂತ್ರಜ್ಞಾನದ ಅತ್ಯಾಧುನಿಕ ಇನ್ಸುಲೇಟೆಡ್ ಬಕೆಟ್ ವ್ಯಾನ್, ಇನ್ಸುಲೇಟೆಡ್ ಬಕೆಟ್ ಮತ್ತು ಇನ್ಸುಲೇಟೆಡ್ ಸ್ಕ್ಯಾಫೋಲ್ಡಿಂಗ್ ಬಳಕೆಯಿಂದ ವಿದ್ಯುತ್ ಸ್ಥಗಿತಗೊಳಿಸದೆ ನಿರ್ವಹಣಾ ಚಟುವಟಿಕೆಯನ್ನು ಕೈಗೊಳ್ಳಲು ಸಾಧ್ಯವಾಗಲಿದೆ.
ಗ್ರಾಹಕರಿಗೆ ತಡೆ ರಹಿತ ವಿದ್ಯುತ್ ಪೂರೈಕೆ ಜತೆಗೆ ವಿದ್ಯುತ್ ಕಂಪನಿಗಳ ನಿರ್ವಹಣಾ ವೆಚ್ಚವನ್ನೂ ಕಡಿತಗೊಳಿಸುವ ಈ ತ್ರಂಜ್ಞಾನದ ಬಳಕೆಗೆ ಕೆಪಿಟಿಸಿಎಲ್ ಮುಂದಾಗಿದೆ,” ಎಂದು ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪಂಕಜ್ ಕುಮಾರ್ ಪಂಕಜ್ ಕುಮಾರ್ ಪಾಂಡೆ ವಿವರಿಸಿದರು.
-oneindia